ADVERTISEMENT

ಫಲಕ ತೆರವಾಗದಿದ್ದರೆ ಹಂತವಾಗಿ ಹೋರಾಟ

ತುಳುನಾಡಿನ ಆಸ್ಮಿತೆಯ ಮೇಲಿನ ದಾಳಿ: ದಿಲ್‌ರಾಜ್‌ ಆಳ್ವ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 12:03 IST
Last Updated 21 ನವೆಂಬರ್ 2020, 12:03 IST
ದಿಲ್‌ರಾಜ್‌ ಆಳ್ವ
ದಿಲ್‌ರಾಜ್‌ ಆಳ್ವ   

ಮಂಗಳೂರು: ಇಲ್ಲಿನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಸ್ತಾಂತರದ ನಂತರ, ಪ್ರಧಾನ ದ್ವಾರದಲ್ಲಿ ‘ಅದಾನಿ ಏರ್‌ಪೋರ್ಟ್ಸ್’ ಎಂದು ಬರೆಯಲಾಗಿದ್ದು, ಅದನ್ನು ಕೂಡಲೇ ತೆರವು ಮಾಡದಿದ್ದಲ್ಲಿ ಹಂತಹಂತವಾಗಿ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ದಿಲ್‌ರಾಜ್ ಆಳ್ವ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಸಂಸದ ಶ್ರೀನಿವಾಸ ಮಲ್ಯರ ಕೊಡುಗೆ, ಕರಾವಳಿ ಜಿಲ್ಲೆಯ ಜನರ ತ್ಯಾಗದ ಸಂಕೇತವಾಗಿರುವ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಲಾಗಿದೆ. ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ಮಾರಾಟ ಮಾಡಿಲ್ಲ, ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಖಾಸಗೀಕರಣ ನೆಪದಲ್ಲಿ ಕಂಪನಿ ತುಳುನಾಡಿನ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವುದು ಖಂಡನೀಯ’ ಎಂದರು.

ಈಗಾಗಲೇ ತುಳುನಾಡಿನ ವಿಜಯಾ ಬ್ಯಾಂಕ್, ಬ್ಯಾಂಕ್‌ ಆಫ್‌ ಬರೋಡ ಆಗಿದೆ. ಕಾರ್ಪೊರೇಶನ್ ಬ್ಯಾಂಕ್ ಯೂನಿಯನ್ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದೆ. ಇದೇ ರೀತಿ ಹಲವು ಸಂಸ್ಥೆಗಳು ಖಾಸಗೀಕರಣಗೊಂಡಿದೆ. ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣ ಹಸ್ತಾಂತರ ವೇಳೆ, ಮಂಗಳೂರು ಸಂಸದರನ್ನು ಆಹ್ವಾನಿಸದೇ ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು.

ADVERTISEMENT

ದೆಹಲಿ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಪಡೆದ ಸಂಸ್ಥೆಯು ಹೆಚ್ಚಿನ ವಾಣಿಜ್ಯ ಮಳಿಗೆಗಳನ್ನು ಆರಂಭಿಸಲು ಯೋಜಿಸಿದಾಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆ ಯೋಜನೆಗೆ ತಡೆ ನೀಡಿದೆ. ಇದೇ ಮಾದರಿಯಲ್ಲಿ ಮಂಗಳೂರಿನಲ್ಲಿ ಹೋರಾಟ ನಡೆಸಲಾಗುವುದು. ರಾಜಕೀಯ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಂಡು ಮುನ್ನಡೆಯಲು ನಿರ್ಣಯಿಸಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಜಾಲತಾಣ ಮೂಲಕ ಅಭಿಯಾನ ಆರಂಭಿಸಿರುವ ನಾವು ಇದೀಗ ಮಾಧ್ಯಮದ ಮೂಲಕ ಬೇಡಿಕೆ ಸಲ್ಲಿಸುತ್ತಿದ್ದೇವೆ. ಬರುವ ದಿನಗಳಲ್ಲಿ ಸಂಸದರು, ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಅದಾನಿ ಸಂಸ್ಥೆಯ ಪ್ರಮುಖರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಇದೇ ವೇಳೆ ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರರಾದ ಉಮಾನಾಥ್ ಕೋಟೆಕಾರ್, ರಿತೇಶ್ ಡಿಸೋಜ, ಕೌಶಿಕ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.