ADVERTISEMENT

ಅಧಿಕಾರಶಾಹಿಗಳ ಮೇಲೆ ಕಣ್ಣಿರಲಿ: ತಪನ್ ಸೇನ್

ಕುಂದಾಪುರ: ಸಿಐಟಿಯು ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ತಪನ್ ಸೇನ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 15:18 IST
Last Updated 17 ನವೆಂಬರ್ 2022, 15:18 IST
ಬಹಿರಂಗ ಸಭೆಯಲ್ಲಿ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ತಪನ್ ಸೇನ್ ಮಾತನಾಡಿದರು
ಬಹಿರಂಗ ಸಭೆಯಲ್ಲಿ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ತಪನ್ ಸೇನ್ ಮಾತನಾಡಿದರು   

ಕುಂದಾಪುರ‌: ದೇಶದ ಸಾಮಾನ್ಯ ಜನರ ತೆರಿಗೆ ಹಣವನ್ನು ಬಂಡವಾಳಶಾಹಿಗಳ ಜೇಬಿಗೆ ತುಂಬುತ್ತಿರುವ ಆಡಳಿತದ ನೀತಿಗಳ ವಿರುದ್ಧ ಎಚ್ಚರ ವಹಿಸಬೇಕು, ಸಂಪತ್ತು ಕೊಳ್ಳೆ ಹೊಡೆಯಲೆಂದೇ ಅಧಿಕಾರದ ಗದ್ದುಗೆ ಏರಿರುವವರ ಬಗ್ಗೆಯೂ ಜಾಗೃತರಾಗಿರಬೇಕು ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ತಪನ್ ಸೇನ್ ಹೇಳಿದರು.

ಇಲ್ಲಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಮೂರು ದಿನ ನಡೆದ ಕಾರ್ಮಿಕರ ಸಿಐಟಿಯು ರಾಜ್ಯ ಸಮ್ಮೇಳನದ ಅಂಗವಾಗಿ ಗುರುವಾರ ಸಂಜೆ ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಹಾಗೂ ಕಾರ್ಮಿಕರ ವಿರುದ್ಧ ನೀತಿಗಳನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗವನ್ನು ನಿರ್ಲಕ್ಷ್ಯ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆತ್ಮನಿರ್ಭರ ಸೇರಿದಂತೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಕೇವಲ ಪ್ರಚಾರ ಹಾಗೂ ಘೋಷಣೆಗೆ ಸಿಮೀತ. ಬೆರಳೆಣಿಕೆಯ ಶ್ರೀಮಂತರ ಹಿತರಕ್ಷಣೆ ಮಾಡುತ್ತಿರುವ ಜನವಿರೋಧಿ ಸರ್ಕಾರ ಹಿಂದೆಂದೂ ಬಂದಿರಲಿಲ್ಲ ಎಂದು ಅವರು ದೂರಿದರು.

ADVERTISEMENT

ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಬಡವರು ಹಾಗೂ ಸಾಮಾನ್ಯ ವರ್ಗದ ಜನರ ತೆರಿಗೆ ಹಣದಿಂದ ಖಜಾನೆ ತುಂಬಿಸಿ, ಬಂಡವಾಳಶಾಹಿಗಳಿಗೆ ನೆರವಾಗುವ ಪ್ರಕ್ರಿಯೆಗಳು ನಡೆಯುತ್ತಿವೆ. ದೇಶದ ವಾಸ್ತವ ಸ್ಥಿತಿಯ ಕುರಿತು ಮಾತನಾಡಿದರೆ, ದೇಶವಿರೋಧಿ ಪಟ್ಟ ಕಟ್ಟಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ದೇಶದ ಯುವ ಸಮುದಾಯದಲ್ಲಿ ಜಾತಿ-ಧರ್ಮದ ಆಫೀಮು ತುಂಬುತ್ತಿದ್ದು ವಾಸ್ತವದ ಬೆಳವಣಿಗೆಗಳ ಕುರಿತು ಎಲ್ಲಿಯೂ ಧನಾತ್ಮಕ ಆಲೋಚನೆ, ನಿರ್ಧಾರ ಪ್ರಕಟವಾಗುತ್ತಿಲ್ಲ. ಹೀಗಾಗಿ ಕಾರ್ಮಿಕ ಸಂಘಟನೆಗಳು ಐಕ್ಯತೆಯ ಬೆಳಕಿನಲ್ಲಿ ಹಕ್ಕುಗಳಿಗಾಗಿ ಅವಿಶ್ರಾಂತ ಹೋರಾಟ ನಡೆಸಬೇಕಾಗಿದೆ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಅವರು ತಪನ್ ಸೇನ್ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ನಿರೂಪಿಸಿದರು. ಎಚ್‌.ನರಸಿಂಹ ವಂದಿಸಿದರು.

ಗಮನ ಸೆಳೆದ ಮೆರವಣಿಗೆ:

ಬಹಿರಂಗ ಸಭೆಯ ಪೂರ್ವಭಾವಿಯಾಗಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಸಾವಿರಾರು ಕಾರ್ಮಿಕ ಪ್ರತಿನಿಧಿಗಳ ಮೆರವಣಿಗೆ ಗಮನ ಸೆಳೆಯಿತು. ಶಾಸ್ತ್ರಿ ವೃತ್ತದಿಂದ ಹೊರಟ ಮೆರವಣಿಗೆ ಹೊಸ ಬಸ್‌ ನಿಲ್ದಾಣ ಬಳಸಿ ಪಾರಿಜಾತ ವೃತ್ತದ ನೆಹರು ಮೈದಾನ ತಲುಪಿತು.

ಹುಲಿವೇಷ, ಕೀಲುಕುದುರೆ, ಬ್ಯಾಂಡ್, ಚೆಂಡೆ, ಕೊಂಬು ಕಹಳೆ ಹಾಗೂ ಕೆಂಬಾವುಟ ಹಿಡಿದ ಸಮವಸ್ತ್ರಧಾರಿ ಕಾರ್ಮಿಕರು ಮೆರವಣಿಗೆಗೆ ಮೆರುಗು ತುಂಬಿದರು. ಎಸ್‌.ವರಲಕ್ಷ್ಮಿ ಸ್ವತ: ಚಂಡೆ ಬಾರಿಸಿ ಕಾರ್ಮಿಕ ಸಂಗಾತಿಗಳ ಸಂಭ್ರಮದಲ್ಲಿ ಪಾಲ್ಗೊಂಡರು.

ಮುಖಂಡರಾದ ಕೆ.ಎನ್.ಉಮೇಶ್, ವಿಜೆಕೆ ನಾಯರ್, ಕೆ.ಎನ್ ಉಮೇಶ್, ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ, ವಿ.ಚಂದ್ರಶೇಖರ್, ಮಹಾಬಲ ವಡೇರಹೋಬಳಿ, ಬಲ್ಕೀಸ್, ವೆಂಕಟೇಶ್ ಕೋಣಿ, ಶೀಲಾವತಿ ಪಡುಕೋಣೆ, ರಾಜು ದೇವಾಡಿಗ ಇದ್ದರು.

ಸಮ್ಮೇಳನದ ನಿರ್ಣಯಗಳು

ಕೈಗಾರಿಕಾ ಧೋರಣೆ, ಕಾರ್ಮಿಕ ವಿರೋಧಿ ನೀತಿಗಳನ್ನು ನಿಲ್ಲಿಸಬೇಕು, ಭ್ರಷ್ಟಾಚಾರದ ಕೂಪವಾಗಿರುವ ಸಾರಿಗೆ ವ್ಯವಸ್ಥೆಯನ್ನು ದೂರವಿರಿಸಿ ಸಾರಿಗೆ ಉದ್ಯಮವನ್ನು ಉಳಿಸಿ, ಸಾರಿಗೆ ವಲಯದಲ್ಲಿ ದುಡಿಯುವ ನೌಕರರ ಹಿತಾಸಕ್ತಿ ಕಾಪಾಡಬೇಕು, ಮೋಟರ್ ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು, ಸೂಕ್ತ ತಿದ್ದುಪಡಿಯೊಂದಿಗೆ ಎಸ್‌ಟಿಯುಎಸ್ ರಕ್ಷಿಸಲು ಕ್ರಮ ಕೈಗೊಳ್ಳಬೇಕು, ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರ ಸೇವೆ ಖಾಯಂ ಮಾಡಿ ಸೌಲಭ್ಯಗಳನ್ನು ಒದಗಿಸಬೇಕು, ಗೃಹಭಾಗ್ಯ ಯೋಜನೆಯಡಿ ಕಾರ್ಮಿಕರಿಗೆ ನಿವೇಶನ ನೀಡಬೇಕು, ಕಾರ್ಪೊರೇಟ್ ಕಂಪನಿಗಳ ದುರಾಡಳಿತ ಕೊನೆಗೊಳಿಸಲು, ಕೃಷಿ ಉಳಿಸಲು, ರೈತ ಕಾರ್ಮಿಕ ಕೂಲಿಕಾರರ ಐಕ್ಯ ಹೋರಾಟ ಬಲಪಡಿಸಬೇಕು, ಅಸಂಘಟಿತ ವಲಯದ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಹಾಗೂ ಪರಿಹಾರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.