ADVERTISEMENT

ಶುಲ್ಕ ಸಂಗ್ರಹ ಕಾರ್ಯದಿಂದ ಬಿಡುಗಡೆಗೊಳಿಸಿ

ಸ್ವಚ್ಛವಾಹಿನಿ ಚಾಲಕಿಯರು, ಸ್ವಚ್ಛತಾ ಕಾರ್ಮಿಕ ಮಹಿಳೆಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:30 IST
Last Updated 10 ಡಿಸೆಂಬರ್ 2025, 4:30 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ಸ್ವಚ್ಛತಾ ಕಾರ್ಮಿಕರು ಕಾಲ್ನಡಿಗೆ ಜಾಥಾ ನಡೆಸಿದರು : ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ಸ್ವಚ್ಛತಾ ಕಾರ್ಮಿಕರು ಕಾಲ್ನಡಿಗೆ ಜಾಥಾ ನಡೆಸಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಸ್ವಚ್ಛತಾ ಕಾರ್ಮಿಕರು, ಸ್ವಚ್ಛತಾ ವಾಹನಗಳ ಚಾಲಕಿಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ಪತ್ರಿಕಾ ಭವನದಿಂದ ಮೆರವಣಿಗೆ ಹೊರಟ ಪೌರ ಕಾರ್ಮಿಕರು, ಜಿಲ್ಲಾ ಪಂಚಾಯಿತಿ ಎದುರು ಧರಣಿ ಕುಳಿತು, ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಸ್ವಚ್ಛತಾ ಪೌರ ಕಾರ್ಮಿಕರು, ಸ್ವಚ್ಛತಾ ವಾಹನಗಳ ಮಹಿಳಾ ಚಾಲಕರನ್ನು ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರಿಂದ ಬಿಡುಗಡೆಗೊಳಿಸಿ, ಪಂಚಾಯಿತಿ ಪೌರ ಕಾರ್ಮಿಕರೆಂದು ಪರಿಗಣಿಸಿ, ನೇರ ವೇತನ ಪಾವತಿಸಬೇಕು. ಹಲವಾರು ವರ್ಷಗಳಿಂದ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು, ವಾಹನ ಚಾಲಕಿಯರನ್ನು ಕಾಯಂಗೊಳಿಸಬೇಕು. ಆರೋಗ್ಯ ತಪಾಸಣೆ, ಆರೋಗ್ಯ ಕಾರ್ಡ್, ಇಎಸ್‌ಐ, ಪಿಎಫ್ ಸವಲತ್ತು, ಮಾಸ್ಕ್, ಗ್ಲೌಸ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಮನೆ–ಮನೆಯಿಂದ ಕಸ ಸಂಗ್ರಹಿಸುವ ಜೊತೆಗೆ, ಪ್ರತಿ ಮನೆಯಿಂದ ಶುಲ್ಕವನ್ನೂ ನಾವೇ ಸಂಗ್ರಹಿಸುವಂತೆ ಒತ್ತಡ ಹೇರುತ್ತಾರೆ. ದಿನವೊಂದಕ್ಕೆ ಕನಿಷ್ಠ 100 ಮನೆಗಳಿಂದ ಶುಲ್ಕ ಸಂಗ್ರಹಿಸುವ ಗುರಿ ನೀಡುತ್ತಾರೆ. ಸ್ವಚ್ಛತೆಗೆ ಸಂಬಂಧಿಸಿ ಯಾವುದೇ ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ, ಈ ಶುಲ್ಕ ಸಂಗ್ರಹದಿಂದ ನಮ್ಮನ್ನು ಬಿಡುಗಡೆಗೊಳಿಸಿ, ಈ ಕೆಲಸವನ್ನು ಗ್ರಾ.ಪಂ. ಸಿಬ್ಬಂದಿ ನಿರ್ವಹಿಸಬೇಕು’ ಎಂದು ಪುತ್ತೂರು ತಾಲ್ಲೂಕು ಪಾಣಾಜೆ ಪಂಚಾಯಿತಿಯ ವಾಹನ ಚಾಲಕಿ ಪೌಲಿನ್ ಮೊಂತೆರೊ ಒತ್ತಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ್ ಮಾತನಾಡಿ, ಸ್ವಚ್ಛತಾ ಕಾರ್ಮಿಕರು ಸಂಜೀವಿನಿ ಒಕ್ಕೂಟದ ಗುತ್ತಿಗೆ ಅಡಿಯಲ್ಲಿ ₹300 ದಿನಗೂಲಿ ಪಡೆಯುತ್ತಿದ್ದಾರೆ. ಕನಿಷ್ಠ ವೇತನ, ಇಎಸ್‌ಐ, ಪಿಎಫ್, ಮಾಸ್ಕ್, ತಿಂಗಳಿಡೀ ಕೆಲಸ ಮುಂತಾದ ಮೂಲಭೂತ ಕಾರ್ಮಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಅನಿಲ್‌ ಕುಮಾರ್ ಮಾತನಾಡಿ, ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ಪರಿಶಿಷ್ಟ ಸಮುದಾಯದ ಕಾರ್ಮಿಕರಿಗೆ ಶೋಷಣೆ ಮಾಡುತ್ತಿದ್ದಾರೆ. ಸಂಜೀವಿನಿ ಒಕ್ಕೂಟದ ದಬ್ಬಾಳಿಕೆಯಿಂದ ಕಾರ್ಮಿಕರನ್ನು ಬಿಡುಗಡೆಗೊಳಿಸಿ, ಗ್ರಾಮ ಪಂಚಾಯಿತಿಯಿಂದ ನೇರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಮುಖಂಡ ಪ್ರೇಮ್‌ ಕುಮಾರ್ ಬಲ್ಲಾಳ್‌ಬಾಗ್, ಮತ್ತಿತರರು ಇದ್ದರು.

‘ಬೇಡಿಕೆಗೆ ಸ್ಪಂದಿಸದ ಆಡಳಿತ’

‘ಕಸ ಸಂಗ್ರಹಣೆ ಶುಲ್ಕ ಪ್ರತಿ ಪಂಚಾಯಿತಿಯಲ್ಲಿ ಬೇರೆ ಇದೆ. ಕೆಲವು ಕಡೆಗಳಲ್ಲಿ ಮಾಸಿಕ ₹50 ಇದ್ದರೆ ಇನ್ನು ಕೆಲವು ಕಡೆ ₹30 ಇದೆ. ನಾವು ಶುಲ್ಕ ಸಂಗ್ರಹಕ್ಕೆ ಹೋದರೆ ಕೆಲವು ಮನೆಯವರು ಬಾಗಿಲು ತೆಗೆಯುವುದಿಲ್ಲ. ಇನ್ನು ಕೆಲವರು ಸಾಕುನಾಯಿ ಬಿಟ್ಟು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ನಿಗದಿತ ಗುರಿ ತಲುಪದಿದ್ದರೆ ನಮಗೆ ವೇತನ ಪಾವತಿಸುವುದಿಲ್ಲ. ಶುಲ್ಕ ಸಂಗ್ರಹವೇ ನಮಗೆ ದೊಡ್ಡ ಹೊರೆಯಾಗಿದ್ದು ಈ ಕೆಲಸದಿಂದ ನಾವು ಬೇಸತ್ತಿದ್ದೇವೆ’ ಎಂದು ವಾಹನ ಚಾಲಕಿಯೊಬ್ಬರು ಹೇಳಿದರು. ಈ ಬಗ್ಗೆ ನಾವು ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆತಿಲ್ಲ. ಹೀಗಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.