ADVERTISEMENT

ಮಂಗಳೂರು: 17,603 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 7:49 IST
Last Updated 7 ಆಗಸ್ಟ್ 2023, 7:49 IST
   

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರ ಸಹಭಾಗಿತ್ವದಲ್ಲಿ ರಾಜ್ಯದ 17,603 ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಚಿಂತನೆಯಂತೆ ವರ್ಷದಲ್ಲಿ ಎರಡು ಬಾರಿ ಅಂದರೆ ಸ್ವಾತಂತ್ರ್ಯೋತ್ಸವ ಹಾಗೂ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಸ್ವಯಂ ಸೇವಕರು ಶ್ರದ್ಧಾಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‍ಗಳ ಸ್ವಚ್ಛತೆಯನ್ನು ಕೈಗೊಳ್ಳುತ್ತಾರೆ.

ಈ ಬಾರಿ ಆಗಸ್ಟ್ 8 ರಿಂದ 14 ರವರೆಗೆ ಸ್ವಚ್ಚತಾ ಸಪ್ತಾಹ ನಡೆಯಲಿದ್ದು, 5,08,156 ಸ್ವಯಂ ಸೇವಕರು ಇದರಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಏಳು ವರ್ಷಗಳಿಂದ ನಿರಂತರವಾಗಿ ಈ ಕೆಲಸ ನಡೆಯುತ್ತಿದೆ. ಈ ವರೆಗೆ ಒಟ್ಟು 1,12,310 ಶ್ರದ್ಧಾಕೇಂದ್ರಗಳ ಸ್ವಚ್ಚತಾ ಕಾರ್ಯ ನಡೆದಿದ್ದು, ಇದರಲ್ಲಿ 40,34,173 ಮಂದಿ ಭಾಗವಹಿಸಿದ್ದಾರೆ.

ರಾಜ್ಯದಾದ್ಯಂತ ದೇವಾಲಯಗಳ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ– ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸುವರು.

ದೇವಸ್ಥಾನದ ಸುತ್ತಲಿನ ಗಿಡಗಂಟಿಗಳ ತೆರವು, ಆವರಣ ಮತ್ತು ಒಳಾಂಗಣ ಸ್ವಚ್ಛತೆ. ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವಥ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸುವುದು. ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ನಾನಕಟ್ಟೆ, ನದಿ ತೀರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಪ್ಲಾಸ್ಟಿಕ್, ಬಟ್ಟೆಬರೆ ಕಸಗಳನ್ನು ನದಿಗೆ ಎಸೆಯದಂತೆ ಅರಿವು ಮೂಡಿಸುವುದು. ಶ್ರದ್ಧಾ ಕೇಂದ್ರದ ಪರಿಕರಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.