ADVERTISEMENT

ಮಂಗಳೂರು: ಕ್ರಿಸ್‌ಮಸ್‌ ಆಚರಣೆಗೆ ಸಜ್ಜಾದ ಕರಾವಳಿ

ವಿದ್ಯುತ್ ದೀಪಗಳ ಅಲಂಕಾರ; ಕ್ರಿಬ್‌ಗಳ ನಿರ್ಮಾಣ: ಹೆಚ್ಚಿದ ಖರೀದಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 16:12 IST
Last Updated 24 ಡಿಸೆಂಬರ್ 2021, 16:12 IST
ಮಂಗಳೂರಿನ ಬಿಷಪ್‌ ಹೌಸ್‌ನಲ್ಲಿ ನಿರ್ಮಿಸಿರುವ ಗೋದಲಿ.
ಮಂಗಳೂರಿನ ಬಿಷಪ್‌ ಹೌಸ್‌ನಲ್ಲಿ ನಿರ್ಮಿಸಿರುವ ಗೋದಲಿ.   

ಮಂಗಳೂರು: ಕ್ರಿಸ್‌ಮಸ್‌ ಆಚರಣೆಗೆ ಕುಡ್ಲ ಸಜ್ಜಾಗಿದೆ. ಚರ್ಚ್‌ಗಳು, ಮಾಲ್‌ಗಳು, ವಾಣಿಜ್ಯ ಮಳಿಗೆಗಳು ಹಬ್ಬದ ಸಂಭ್ರಮಕ್ಕೆ ಶೃಂಗಾರಗೊಂಡಿವೆ. ಕಳೆದ ಬಾರಿ ಕೋವಿಡ್–19 ನಿಂದ ಕಳೆಗುಂದಿದ್ದ ಹಬ್ಬದ ಆಚರಣೆ, ಈ ಬಾರಿ ಸಂಭ್ರಮದಿಂದ ನಡೆಯಲಿದೆ. ಬಹುತೇಕ ಜನರು ತವರಿಗೆ ಮರಳಿದ್ದು, ಹಬ್ಬದ ಸಂಭ್ರಮವನ್ನು ಕುಟುಂಬದವರ ಜೊತೆಗೆ ಸೇರಿ ಆಚರಿಸಲಿದ್ದಾರೆ.

ಕರಾವಳಿಯ ಎಲ್ಲ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ನಿರ್ಮಿಸಲಾಗಿತ್ತು. ನಕ್ಷತ್ರಗಳನ್ನು ಜೋಡಿಸಲಾಗಿತ್ತು. ಚರ್ಚ್‌ಗಳಲ್ಲಿ ಶುಕ್ರವಾರ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರಿಸ್ಮಸ್ ಕ್ಯಾರೆಲ್‌ಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಲಾಯಿತು.

‘ಕಳೆದ ವರ್ಷ ಕೋವಿಡ್–19 ಕಾರಣದಿಂದ ಸರಳವಾಗಿ ಕ್ರಿಸ್‌ಮಸ್‌ ಆಚರಿಸಲಾಗಿತ್ತು. ಕೇವಲ ಕುಟುಂಬದ ಸದಸ್ಯರು ಮಾತ್ರ ಹಬ್ಬದಲ್ಲಿ ಪಾಲ್ಗೊಂಡಿದ್ದೆವು. ಈ ಬಾರಿ ಹಲವಾರು ಅತಿಥಿಗಳು ಸಂಭ್ರಮದಲ್ಲಿ ಭಾಗಿ ಆಗಲಿದ್ದಾರೆ. ದೇಶ, ವಿದೇಶಗಳ ಜನರು ತವರಿಗೆ ಮರಳುತ್ತಿದ್ದಾರೆ. ಈ ಬಾರಿ ಹಬ್ಬ ಸಂಭ್ರಮ ತುಸು ಹೆಚ್ಚಾಗಿದೆ’ ಎಂದು ನಿವೃತ್ತ ಉದ್ಯೋಗಿ ಮಾಬೆಲ್‌ ಲೋಬೊ ಹೇಳಿದರು.

ADVERTISEMENT

‘ಕ್ಯಾರೆಲ್‌ ಹಾಡುಗಳು, ಅಲಂಕಾರಗಳು ನಗರದಾದ್ಯಂತ ಕಾಣುತ್ತಿವೆ. ನಮ್ಮ ಬಂಧುಗಳು ವಿದೇಶದಲ್ಲಿ ನೆಲೆಸಿದ್ದು, ಕಳೆದ ವರ್ಷ ಇಲ್ಲಿಗೆ ಬರಲು ಆಗಿರಲಿಲ್ಲ. ಕಳೆದ ವರ್ಷ ಕುಶ್ವಾರವನ್ನೂ ತಯಾರಿಸಿರಲಿಲ್ಲ. ಆದರೆ, ಈ ವರ್ಷ ಪರಿಸ್ಥಿತಿ ತುಸು ಸುಧಾರಣೆ ಆಗಿದೆ. ಈಗಾಗಲೇ ಹಲವಾರು ಜನರು ವಿದೇಶಗಳಿಂದ ತವರಿಗೆ ಬಂದಿದ್ದು, ಕುಶ್ವಾರ ತಯಾರಿಯಲ್ಲಿ ತೊಡಗಿದ್ದಾರೆ. ಓಮೈಕ್ರಾನ್‌ ಭೀತಿ ಇದ್ದರೂ, ಅಗತ್ಯ ಮುಂಜಾಗ್ರತೆಯೊಂದಿಗೆ ಕುಟುಂಬದ ಸದಸ್ಯರು, ಸ್ನೇಹಿತರ ಜೊತೆಗೆ ಹಬ್ಬವನ್ನು ಆಚರಿಸುತ್ತೇವೆ’ ಎಂದು ಬ್ಯಾಂಕ್‌ ಉದ್ಯೋಗಿ ಲಿನೆಟ್‌ ಮಿನೇಜಸ್‌ ಹೇಳುತ್ತಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ವ್ಯಾಪಾರ ತುಸು ಸುಧಾರಿಸಿದೆ. ಜನರೂ ಮಾರುಕಟ್ಟೆಗೆ ತೆರಳಿ, ಕೇಕ್‌, ಅಲಂಕಾರ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಅನಿವಾಸಿ ಭಾರತೀಯರು ನಗರಕ್ಕೆ ಮರಳಿಸಿದ್ದು, ಅವರಿಂದಲೂ ಹಲವಾರು ಆರ್ಡರ್‌ಗಳು ಬಂದಿವೆ’ ಎಂದು ಕ್ರೇವ್‌ ಡಸರ್ಟ್‌ ಮತ್ತು ಬೇಕ್ಸ್‌ನ ಮೈಕೆಲ್‌ ಸಲ್ಡಾನ ಹೇಳಿದರು.

‘ಕ್ರಿಸ್‌ಮಸ್‌ ಹಾಗೂ ಮದುವೆಯ ಸೀಸನ್‌ ಇರುವುದರಿಂದ ಶಂಕರಪುರ ಮಲ್ಲಿಗೆಯ ದರ ಹೆಚ್ಚಾಗಿದೆ. ಆದರೂ, ವ್ಯಾಪಾರ ಸ್ವಲ್ಪ ಹೆಚ್ಚಾಗಿದೆ’ ಎನ್ನುತ್ತಾರೆ ಹೂ ಮಾರಾಟಗಾರ ಶೇಖರ್‌.

ಶಾಲೆಗಳಲ್ಲೂ ಮಕ್ಕಳು ಕ್ರಿಸ್‌ಮಸ್‌ ಸಂಭ್ರಮವನ್ನು ಸ್ನೇಹಿತರೊಂದಿಗೆ ಆಚರಿಸುತ್ತಿದ್ದಾರೆ. ಕಳೆದ ವರ್ಷ ಆನ್‌ಲೈನ್‌ ಮೂಲಕ ಆಚರಣೆಯನ್ನು ವೀಕ್ಷಿಸಿದ್ದ ಮಕ್ಕಳು, ಈ ಬಾರಿ ತಮ್ಮ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

‘ಕಳೆದ ವರ್ಷ ಶಾಲೆ ಸಿಬ್ಬಂದಿ ಮಾತ್ರ ಕ್ರಿಸ್‌ಮಸ್‌ ಆಚರಣೆ ಮಾಡಿದ್ದರು. ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ಮಕ್ಕಳಿಗೆ ಪ್ರಸಾರ ಮಾಡಲಾಗಿತ್ತು. ಈ ಬಾರಿ ಮಕ್ಕಳ ತರಗತಿಗಳು ಆರಂಭವಾಗಿದ್ದು, ಕ್ರಿಸ್‌ಮಸ್‌ ಅಂಗವಾಗಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು’ ಎಂದು ಮೌಂಟ್‌ ಕಾರ್ಮೆಲ್‌ ಸೆಂಟ್ರಲ್‌ ಸ್ಕೂಲ್‌ನ ಪ್ರಾಂಶುಪಾಲರಾದ ಮೆಲಿಸ್ಸಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.