ಮಂಗಳೂರು: ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಈ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮು ಗಲಭೆಗಳು ನಡೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
₹75 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಸಂಕೀರ್ಣ ‘ಪ್ರಜಾಸೌಧ’ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯದಂತೆ ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ ಕಾಪಾಡಿಕೊಳ್ಳುವ ಜೊತೆಗೆ, ಸಹಿಷ್ಣುತೆ, ಸಹಬಾಳ್ವೆಯೂ ಬಹು ಮುಖ್ಯವಾಗಿದೆ. ಒಂದೇ ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಿಸುವಲ್ಲಿ ಎಲ್ಲ ರಾಜಕಾರಣಿಗಳ ಪಾತ್ರ ಇದೆ ಎಂದರು.
ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಬಯಲುಸೀಮೆ, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಎಲ್ಲ ಭಾಗಗಳಿಗೂ ಸಮಾನ ನ್ಯಾಯ ನೀಡಿದೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ದೊರೆತಾಗ ಮಾತ್ರ ಸಮಾಜದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರ ಮಾತಿಗೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಸ್ಥಾಪನೆ ಆಗಿ, ಜನರ ಬದುಕು ಹಸನಾಗಬೇಕು ಎಂದರು. ಇದೇ ದಾಟಿಯನ್ನು ಪ್ರತಿಧ್ವನಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ‘ದ್ವೇಷಮುಕ್ತ ಮತ್ತು ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮ ಆದ್ಯತೆ ಆಗಬೇಕು’ ಎಂದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, 50 ವರ್ಷಗಳ ಇತಿಹಾಸ ಪರಿಶೀಲಿಸಿದರೆ, ಇಲ್ಲಿಯವರೆಗೆ 17,230 ಜನರ ಜಮೀನು ಮಾತ್ರ ಪೋಡಿ ಆಗಿತ್ತು. ನನ್ನ ಭೂಮಿ ಅಭಿಯಾನದ ಅಡಿಯಲ್ಲಿ ಕೇವಲ ಆರು ತಿಂಗಳುಗಳಲ್ಲಿ 30 ಸಾವಿರ ಜನರ ಜಮೀನು ಸರ್ವೆ ಮಾಡಿದ್ದು, ಪ್ರಸ್ತುತ 8 ಸಾವಿರ ಜನರ ಜಮೀನು ಪೋಡಿ ಮಾಡಿ, ಆರ್‌ಟಿಸಿ ನೀಡಲಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ 80 ಸಾವಿರ ರೈತರ ಜಮೀನು ಸರ್ವೆ ನಡೆಸಿ, ಪೋಡಿ, ಮಾಡಿ ಆರ್‌ಟಿಸಿ ನೀಡಲು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.