ಪುತ್ತೂರು: ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ನೀಡುವುದೇ ಮಾನಸಿಕ ಸಮಸ್ಯೆಗೆ ಮೊದಲ ಪರಿಹಾರ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಪುತ್ತೂರಿನ ನವೀಕೃತ ಸಾಂತ್ವನ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದಂಪತಿಗಳ ನಡುವಿನ ವೈಮನಸ್ಸು ನಿವಾರಣೆ ಹಾಗೂ ಮಧ್ಯ ವಯಸ್ಸಿನ ಮಹಿಳೆಯರ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಲು ಸಾಂತ್ವನ ಕೇಂದ್ರಗಳು ಮಹತ್ವದ ಕಾರ್ಯ ಮಾಡುತ್ತಿವೆ. ಮಾನಸಿಕ ಒತ್ತಡ ನಿವಾರಣೆಗೆ ಮದ್ದಿಗಿಂತಲೂ ಹೆಚ್ಚು ಸಾಂತ್ವನ ಪರಿಣಾಮಕಾರಿಯಾಗಿದೆ ಎಂದರು.
ಪುತ್ತೂರು ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಮಾನಸಿಕ ಸಮಸ್ಯೆಗಳ ಮೂಲ ಹುಡುಕುವ ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯ ನಿರ್ವಹಿಸುತ್ತಿರುವ ಸಾಂತ್ವನ ಕೇಂದ್ರ ಜನತೆಗೆ ಸಹಕಾರಿಯಾಗಿದೆ. ಇದೊಂದು ಶಕ್ತಿ ತುಂಬುವ ಕೇಂದ್ರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅವರು ಸಾಂತ್ವನ ಕೇಂದ್ರದಿಂದ ನೊಂದವರಿಗೆ ಸಾಂತ್ವನ ಸಿಗುವಂತಾಗಲಿ ಎಂದು ಆಶಿಸಿದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನಶೆಟ್ಟಿ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಇಲ್ಲಿನ ಶಾಸಕರು ಒತ್ತು ನೀಡುತ್ತಿದ್ದಾರೆ. ಪುತ್ತೂರಿನಲ್ಲಿ ಅಭಿವೃದ್ಧಿ ಸಮನ್ವಯ ರಾಜಕೀಯ ಇದೆ. ಇದು ಮಹಿಳಾಪರ ಚಿಂತನೆಗೆ ಪೂರಕವಾಗಿದೆ. ಪರಿಸರ ಮತ್ತು ಸ್ತ್ರಿಶಕ್ತಿ ರಕ್ಷಣೆಗೆ ಆದ್ಯತೆ ನೀಡಿದಾಗ ನಮ್ಮ ಬದುಕು ಪರಿಪೂರ್ಣವಾಗುತ್ತದೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಸಾಂತ್ವನ ಕೇಂದ್ರದ ಮೂಲಕ ಮಹಿಳಾ ಜಾಗೃತಿ ಸಮಾವೇಶ ನಡೆಸುವ ಚಿಂತನೆ ಇದೆ ಎಂದರು.
ಪುತ್ತೂರು ನಗರಸಭೆಯ ಪೌರಾಯುಕ್ತ ಮಧು ಎಸ್.ಮನೋಹರ್ ಸ್ವಾಗತಿಸಿದರು. ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ನಿಶಾಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತರಾದ ಬಿಂದು ಕುಮಾರಿ, ಸ್ವಾತಿ, ನಿತಿನ್ ಕುಮಾರ್ ಭಾಗವಹಿಸಿದ್ದರು.
ಸಾಂತ್ವನ ಕೇಂದ್ರದ ಲೋಕಾರ್ಪಣೆಗೆ ಮೊದಲು ಪುತ್ತೂರು ಬಸ್ ನಿಲ್ದಾಣದ ಬಳಿ ₹ 16 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಹೈಟೆಕ್ ಶೌಚಾಲಯವನ್ನು ಶಾಸಕ ಅಶೋಕ್‌ಕುಮಾರ್ ರೈ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.