ADVERTISEMENT

26ವರ್ಷಗಳ ಹಿಂದಿನ ಕೋಮು ಗಲಭೆ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 6:07 IST
Last Updated 9 ಸೆಪ್ಟೆಂಬರ್ 2025, 6:07 IST
   

ಮಂಗಳೂರು: 26 ವರ್ಷಗಳ ಹಿಂದೆ ಹಳೆಯಂಗಡಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣದ ಆರೋಪಿಗಳಿಬ್ಬರನ್ನು ಮೂಲ್ಕಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೂಲ್ಕಿ ತಾಲ್ಲೂಕಿನ ಪಕ್ಷಿಕೆರೆ ಕೆಮ್ರಾಲ್ ಗ್ರಾಮದ ಲೀಲಾಧರ್ (52) ಹಾಗೂ ಹಳೆಯಂಗಡಿ ಪಡುಪಣಂಬೂರಿನ ಚಂದ್ರಹಾಸ್ ಕೇಶವ ಶೆಟ್ಟಿ (59) ಬಂಧಿತರು. ಆರೋಪಿಗಳಿಗೆ  ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೂಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿಯಲ್ಲಿ 1998ರ ಡಿ. 31ರಂದು ಕೋಮು ಗಲಭೆ ನಡೆದಿತ್ತು. ಪ್ರಕರಣದ ಆರೋಪಿಗಳಾದ ಲೀಲಾಧರ್ ಹಾಗೂ ಚಂದ್ರಹಾಸ್ ಕೆ. ಶೆಟ್ಟಿ ತಲೆಮರೆಸಿಕೊಂಡಿದ್ದರು. ಮೂಡುಬಿದಿರೆ ಜೆಎಂಎಫ್‌ಸಿ ನ್ಯಾಯಾಲಯವು ದೀರ್ಘಾವಧಿಯಲ್ಲಿ ಬಗೆಹರಿಯದ ಪ್ರಕರಣ ಎಂದು ಘೋಷಿಸಿತ್ತು. ಆರೋಪಿ ಲೀಲಾಧರ ವಿದೇಶಕ್ಕ ಪರಾರಿಯಾಗಿದ್ದು, ಇತ್ತೀಚೆಗೆ ಸ್ವದೇಶಕ್ಕೆ ಮರಳಿದ್ದ. ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇನ್ನೊಬ್ಬ ಆರೋಪಿ  ಚಂದ್ರಹಾಸ್ ಕೆ. ಶೆಟ್ಟಿ ದುಬೈಗೆ ಪರಾರಿಯಾಗಿದ್ದ. ಊರಿಗೆ ಮರಳಿದ್ದ ಆತನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಆ.30ರಂದು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲಿಸರು ಮಾಹಿತಿ  ನೀಡಿದ್ದಾರೆ.  ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಕುರಿತು ಈ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 208 ಮತ್ತು 209 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.