ಮಂಗಳೂರು: ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯು ಪ್ರತಿಕೂಲ ಸಾಕ್ಷಿ ಹೇಳಿದ ಕಾರಣ ಆಕೆಗೆ ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ಪರಿಹಾರ ಧನವನ್ನು ನ್ಯಾಯಾಲಯದ ಆದೇಶದಂತೆ ವಾಪಸ್ ಪಡೆಯಲಾಗಿದ್ದು, ಆ ಮೊತ್ತವನ್ನು ಸರ್ಕಾರದ ಖಾತೆಗೆ ಜಮೆ ಮಾಡಲಾಗಿದೆ.
ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಅವರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. 39 ಸಾಕ್ಷಿದಾರರ ಸಹಿ ಸಂಗ್ರಹಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಹಾಗೂ ಜಿಲ್ಲಾ ತ್ವರಿತ ಗತಿಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
2023 ಅಕ್ಟೋಬರ್ 5ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಧೀಶೆ ಮಂಜುಳಾ ಅವರು, ನವೆಂಬರ್ 17ರಂದು ವಿಚಾರಣೆ ಪೂರ್ಣಗೊಳಿಸಿದ್ದರು. ವಿಚಾರಣೆಯ ಮಧ್ಯೆ ಸಂತ್ರಸ್ತೆ ಹಾಗೂ ಆಕೆಯ ಕಡೆಯವರು ಪ್ರತಿಕೂಲ ಸಾಕ್ಷಿ ಹೇಳಿದ್ದರು.
ಪ್ರಕರಣದಲ್ಲಿ ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಎಫ್‌ಐಆರ್ ದಾಖಲಾದಾಗ ಸರ್ಕಾರದಿಂದ ₹1.25 ಲಕ್ಷ ಹಾಗೂ ಪ್ರಕರಣದ ದೋಷಾರೋಪಣಾ ಪತ್ರ ಸಲ್ಲಿಸಿದಾಗ ₹ 2.50 ಲಕ್ಷ ಪರಿಹಾರ ಧನವನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಂಜೂರು ಮಾಡಿದ್ದರು. ಸಂತ್ರಸ್ತೆಯು ಬಾಲಕಿಯಾಗಿದ್ದ ಕಾರಣ ಚಿಕ್ಕಮ್ಮನ ಖಾತೆಗೆ ಹಣ ಜಮೆ ಮಾಡಲಾಗಿತ್ತು.
ಸಂತ್ರಸ್ತೆಗೆ ನೀಡಿದ ₹3.75 ಲಕ್ಷ ಪರಿಹಾರದ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಸಂತ್ರಸ್ತೆಯು ಪ್ರತಿಕೂಲ ಸಾಕ್ಷಿ ನುಡಿದಿದ್ದಾರೆ. ವಿಚಾರಣೆ ಮಾಡಿದ ತನಿಖಾಧಿಕಾರಿಯ ಸಾಕ್ಷ್ಯವನ್ನು ಆಧರಿಸಿ ಪರಿಹಾರದ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಆದೇಶಿಸಬೇಕೆಂದು ಮನವಿ ಮಾಡಿದ್ದರು.
‘ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು, ಸಂತ್ರಸ್ತೆಗೆ ವಿತರಿಸಿದ್ದ ಮೊತ್ತವನ್ನು ವಸೂಲು ಮಾಡಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ನಿರ್ದೇಶಿಸಿತ್ತು. ಅದರಂತೆ ಜ.4ರಂದು ₹3.75 ಲಕ್ಷ ಮೊತ್ತವನ್ನು ಸಂತ್ರಸ್ತೆಯ ಚಿಕ್ಕಮ್ಮನಿಂದ ವಸೂಲು ಮಾಡಿ ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಜಂಟಿ ಖಾತೆಗೆ ಇಲಾಖಾ ಉಪನಿರ್ದೇಶಕರು ಮರು ಜಮೆ ಮಾಡಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.