ADVERTISEMENT

200 ಪ್ರತಿನಿಧಿಗಳು ಭಾಗಿ: ಸಚ್ಚಿದಾನಂದ ರೈ

26ರಂದು ಪ್ರಥಮ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ಮೇ 2019, 15:27 IST
Last Updated 22 ಮೇ 2019, 15:27 IST

ಮಂಗಳೂರು: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ವತಿಯಿಂದ ಮಂಗಳೂರು ಶಾಖೆಯ ಆಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ಹಾಗೂ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 26ರಂದು ನಗರದ ಐಎಂಎ ಸಭಾಗೃಹದಲ್ಲಿ ನಡೆಯಲಿದೆ ಎಂದು ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸಚ್ಚಿದಾನಂದ ರೈ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ವೈದ್ಯ ಸಾಹಿತ್ಯ ವಿಪುಲವಾಗಿ ಬೆಳೆದಿದ್ದರೂ, ವೈದ್ಯ ಸಾಹಿತಿಗಳ ಸಮ್ಮೇಳನ ಇದುವರೆಗೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ವೈದ್ಯ ಬರಹಗಾರರಿಗೆ ಉತ್ತೇಜನ ನೀಡುವ ಮತ್ತು ವೈದ್ಯ ಸಾಹಿತಿಗಳ ಚಿಂತನ ಮಂಥನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಮಹತ್ವದ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆ ಆಶ್ರಯದಲ್ಲಿ 2017ರಲ್ಲಿ ಕನ್ನಡ ವೈದ್ಯ ಬರಹಗಾರರ ಬಳಗ ಸ್ಥಾಪಿಸಲಾಗಿದ್ದು, ಅತ್ಯುತ್ತಮ ವೈದ್ಯ ಬರಹಗಾರರಿಗೆ ಶ್ರೇಷ್ಠ ವೈದ್ಯ ಸಾಹಿತಿ ಎಂಬ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಮೈಸೂರಿನ ಡಾ.ಎಸ್.ಪಿ.ಯೋಗಣ್ಣ ಮತ್ತು ಭದ್ರಾವತಿಯ ಡಾ.ವೀಣಾ ಭಟ್ ಅವರು ಈ ಹಿಂದೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಕನ್ನಡ ವೈದ್ಯ ಬರಹಗಾರರ ಸಮ್ಮೇಳನವನ್ನು ಪ್ರತಿ ವರ್ಷ ನಡೆಸಿ, ಕನ್ನಡ ವೈದ್ಯಕೀಯ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚಿಸಿ, ಕನ್ನಡ ವೈದ್ಯ ಸಾಹಿತ್ಯ ಬೆಳವಣಿಗೆಗೆ ಮಾರ್ಗಸೂಚಿ ರೂಪಿಸುವುದು ಕೂಡಾ ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ತಿಳಿಸಿದರು.

ADVERTISEMENT

ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಅಣ್ಣಯ್ಯ ಕುಲಾಲ್ ಮಾತನಾಡಿ, ಸಮ್ಮೇಳನ 26ರಂದು ಬೆಳಿಗ್ಗೆ 9 ಗಂಟೆಗೆ ನಗರದ ಐಎಂಎ ಭವನದ ಎ.ವಿ.ರಾವ್ ಸಭಾಂಗಣದಲ್ಲಿ ಆರಂಭವಾಗಲಿದ್ದು, ದಿನವಿಡೀ ವಿವಿಧ ಗೋಷ್ಠಿಗಳು, ಕವಿಗೋಷ್ಠಿಗಳು ನಡೆಯಲಿವೆ. ವೈದ್ಯಕೀಯ ವೃತ್ತಿಯ ತಲ್ಲಣಗಳು, ವಿನೋದ ಪ್ರಸಂಗಗಳು, ವೈದ್ಯಕೀಯ ಸಾಹಿತ್ಯ ಇಂದು- ಮುಂದು ಎಂಬಿತ್ಯಾದಿ ಆರು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.

ಪ್ರಾದೇಶಿಕ ಭಾಷೆಯೊಂದರಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ವೈದ್ಯ ಬರಹಗಾರರ ಸಮ್ಮೇಳನ ಇದಾಗಿದ್ದು, ನಾಡಿನ ಮೂಲೆ ಮೂಲೆಗಳಿಂದ ಬರಲಿರುವ ಸುಮಾರು 200 ಕ್ಕೂ ಹೆಚ್ಚು ವೈದ್ಯ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮ್ಮೇಳನವನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಆಶಯ ಭಾಷಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರದೀಪ್ ಕುಮಾರ್ ಕಲ್ಕೂರ ಗೌರವ ಅತಿಥಿಗಳಾಗಿ ಭಾಗವಹಿಸುವರು. ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಅನ್ನದಾನಿ ಎಂ.ಮೇಟಿ ಪಾಲ್ಗೊಳ್ಳುವರು. ಹೆಸರಾಂತ ವೈದ್ಯ ಸಾಹಿತಿ, ಹೃದ್ರೋಗ ತಜ್ಞ, ಮೈಸೂರು ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಐಎಂಎ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್, ಡಾ.ಕಸ್ತೂರಿ ಮೋಹನ್ ಪೈ, ಡಾ.ಕೆ.ಆರ್.ಕಾಮತ್, ಡಾ.ಬಿ.ಆರ್.ಭಟ್, ಡಾ.ಪ್ರಶಾಂತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.