ADVERTISEMENT

ದೇಶದ್ರೋಹಿಗಳನ್ನು ಗಡಿಪಾರು ಮಾಡಲಿ: ಶಾಸಕ ಯು.ಟಿ.ಖಾದರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 12:12 IST
Last Updated 13 ಡಿಸೆಂಬರ್ 2021, 12:12 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಸಿನವನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಅವರನ್ನು ಗಡಿಪಾರು ಮಾಡಬೇಕು ಎಂದು ಶಾಸಕ ಯು.ಟಿ.ಖಾದರ್ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೇನೆ ಮುಖ್ಯಸ್ಥರ ಸಾವಿಗೆ ಇಡೀ ದೇಶ ನೋವಿನಲ್ಲಿರುವಾಗ ಕೆಲವರು, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿದ್ದಾರೆ. ಈ ಪ್ರಕರಣವನ್ನು ಸರ್ಕಾರಿ ಗಂಭೀರವಾಗಿ ಪರಿಗಣಿಸಿ, ಇಂತಹ ವಿಕೃತ ಮನಸ್ಥಿತಿಯ ಜನರ ಮುಖವನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಇಂತಹ ವ್ಯಕ್ತಿಗಳು ನಿಜವಾದ ದೇಶದ್ರೋಹಿಗಳು. ಇವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಯಾಕೆ ಚುರುಕಾಗಿಲ್ಲ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವು ತನ್ನ ಎಲ್ಲ ಹಂತಗಳ ವೈಫಲ್ಯ ಮುಚ್ಚಿಕೊಳ್ಳಲು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಲು ಮುಂದಾಗಿದೆ. ಕೋವಿಡ್ ಪರಿಹಾರ, ಬಡವರಿಗೆ ಮನೆ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್, ರೇಷನ್‌ ಕಾರ್ಡ್‌ ಹೀಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ, ಜನರ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಈ ತಂತ್ರ ಬಳಸುತ್ತಿದೆ. ಬಲವಂತದ ಮತಾಂತರವನ್ನು ಯಾವ ಧರ್ಮವೂ ಬೆಂಬಲಿಸುವುದಿಲ್ಲ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತಿರುವ ಬಿಜೆಪಿ ಸಮಾಜಕ್ಕೆ ತಪ್ಪು ಸಂದೇಶ ನೀಡಿ, ಗೊಂದಲ ಸೃಷ್ಟಿಸುತ್ತಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಝೀರ್ ಬಜಾಲ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.