ADVERTISEMENT

ರಫೇಲ್: ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ– ಕೇಂದ್ರದ ವಿರುದ್ಧ ಪಲ್ಲಂ ರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:31 IST
Last Updated 18 ಡಿಸೆಂಬರ್ 2018, 12:31 IST
ಪಲ್ಲಂ ರಾಜು
ಪಲ್ಲಂ ರಾಜು   

ಮಂಗಳೂರು: ರಫೇಲ್‌ ಒಪ್ಪಂದದ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಪಲ್ಲಂ ರಾಜು ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಂಟಿ ಸಂಸದೀಯ ಸಮಿತಿಯಿಂದ ರಫೇಲ್‌ ಹಗರಣದ ಕುರಿತು ತನಿಖೆ ನಡೆಸಬೇಕು ಎನ್ನುವುದು ಕಾಂಗ್ರೆಸ್‌ನ ನಿಲುವಾಗಿದೆ ಎಂದರು.

ರಫೇಲ್‌ ಒಪ್ಪಂದ ದೇಶದ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಅತ್ಯಂತ ದೊಡ್ಡ ಹಗರಣವಾಗಿದೆ. ದೇಶದ ರಕ್ಷಣಾ ವಿಭಾಗದ ವಿಮಾನ ತಯಾರಿಸುವ ಸಾಮರ್ಥ್ಯವನ್ನು ಎಚ್‌ಎಎಲ್‌ ಹೊಂದಿದ್ದು, 40 ವರ್ಷಗಳ ಅನುಭವವಿರುವ ಏಕೈಕ ಸಂಸ್ಥೆಯಾಗಿದೆ. ಈ ಒಪ್ಪಂದದಲ್ಲಿ ಎಚ್ಎಎಲ್‌ ಅನ್ನು ಬಿಟ್ಟು, ಇನ್ನೊಂದು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದರು.

ADVERTISEMENT

ಯುಪಿಎ ಸರ್ಕಾರ ಇರುವಾಗ ಮಾಡಿಕೊಂಡಿರುವ ಒಪ್ಪಂದವನ್ನು ಬದಲಾಯಿಸಿ, ರಿಲಾಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ ಜತೆಗೆ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವೇನಿತ್ತು? ಖರೀದಿಸುವ ವಿಮಾನದ ಮೊತ್ತವನ್ನು ಮೂರು ಪಟ್ಟಿಗಿಂತಲೂ ಹೆಚ್ಚು ಮಾಡಲು ಏನು ಕಾರಣ ಎಂದು ಪ್ರಶ್ನಿಸಿದ ಅವರು, ದೇಶದ ಬೊಕ್ಕಸಕ್ಕೆ ₹41,205 ಕೋಟಿ ನಷ್ಟಕ್ಕೆ ಕಾರಣವಾಗಿರುವ ಈ ಹಗರಣವನ್ನು ದೇಶದ ಎದುರು ಬಹಿರಂಗಪಡಿಸುವ ಹೊಣೆಗಾರಿಕೆ ಪ್ರಧಾನಿ ಅವರ ಮೇಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಫ್ರಾನ್ಸ್‌ ಪ್ರವಾಸಕ್ಕೆ ತೆರಳುವವರೆಗೆ ರಫೇಲ್‌ ವಿಮಾನ ಖರೀದಿಯಲ್ಲಿ ಎಚ್‌ಎಎಲ್‌ನ ಹೆಸರಿತ್ತು. ಪ್ರವಾಸದ ನಂತರ ಈ ಪ್ರಸ್ತಾವ ಏಕಾಏಕಿ ಬದಲಾಗಿದ್ದು ಏಕೆ ಎನ್ನುವುದನ್ನು ಪ್ರಧಾನಿ ದೇಶದ ಜನರಿಗೆ ತಿಳಿಸಬೇಕು. ರಕ್ಷಣಾ ವಿಭಾಗದ ಖರೀದಿಗೆ ಸಂಬಂಧಿಸಿದಂತೆ ಡಿಪಿಎ ನಿಯಮಾವಳಿಯನ್ನು ಪ್ರಧಾನಿ ಉಲ್ಲಂಘಿಸಿದ್ದಾರೆ ಎಂದು ದೂರಿದರು.

ವಿಮಾನ ಖರೀದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೂ ತಪ್ಪು ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಸತ್ಯ ಸಂಗತಿಗಳನ್ನು ಮುಚ್ಚಿಡಲು ಪ್ರಯತ್ನಿಸಿದೆ. ಯುಪಿಎ ಅವಧಿಯಲ್ಲಿ ಒಂದು ವಿಮಾನ ಖರೀದಿಗೆ ₹526 ಕೋಟಿ ನಿಗದಿಯಾಗಿದ್ದು, ಇದೀಗ ಅದು ₹1,670 ಕೋಟಿಗೆ ಹೇಗೆ ಹೆಚ್ಚಿಸಲಾಯಿತು ಎಂಬುದರ ಕುರಿತು ಸುಪ್ರೀಂ ಕೋರ್ಟ್‌ಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲದಾಗಿದೆ. ಪ್ರತಿಪಕ್ಷಗಳ ಸದಸ್ಯರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಜೆ.ಆರ್‌. ಲೋಬೊ, ಮುಡಾ ಅಧ್ಯಕ್ಷ ಸುರೇಶ್‌ ಬಳ್ಳಾಲ್‌, ಕಳ್ಳಿಗೆ ತಾರಾನಾಥ ಶೆಟ್ಟಿ, ನವೀನ್‌ ಡಿಸೋಜ, ಟಿ.ಕೆ. ಸುಧೀರ್, ಸಲೀಂ, ಆರೀಫ್‌, ಸುಮಂತ್‌ರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.