ADVERTISEMENT

ಕಾಂಗ್ರೆಸ್ ಟಿಕೆಟ್: ದ.ಕ ಜಿಲ್ಲೆಯ 8 ಕ್ಷೇತ್ರದಗಳಿಂದ 45 ಮಂದಿ ಅರ್ಜಿ

ಕೆಪಿಸಿಸಿಗೆ 45ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ, ಟಿಕೆಟ್ ಪಡೆಯಲು ಆರಂಭವಾದ ಲಾಬಿ

ಸಂಧ್ಯಾ ಹೆಗಡೆ
Published 22 ನವೆಂಬರ್ 2022, 5:06 IST
Last Updated 22 ನವೆಂಬರ್ 2022, 5:06 IST
   

ಮಂಗಳೂರು: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿ 45ಕ್ಕೂ ಹೆಚ್ಚು ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅರ್ಜಿ ಆಹ್ವಾನಿಸಿತ್ತು. ಅರ್ಜಿಗೆ ₹ 5,000 ನಿಗದಿಪಡಿಸಿ, ₹ 2 ಲಕ್ಷದ ಡಿ.ಡಿ.ಯನ್ನು ಪಕ್ಷಕ್ಕೆ ವಂತಿಗೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಪುತ್ತೂರು ಹಾಗೂ ಮಂಗಳೂರು ಉತ್ತರ ಕ್ಷೇತ್ರದಿಂದ ಅತಿ ಹೆಚ್ಚು ಆಕಾಂಕ್ಷಿಗಳು ಅರ್ಜಿ ನೀಡಿದ್ದಾರೆ.ಅರ್ಜಿ ಸಲ್ಲಿಸುವ ಅವಧಿ ಸೋಮವಾರಕ್ಕೆ ಮುಕ್ತಾಯಗೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ADVERTISEMENT

ಅರ್ಜಿ ಸಲ್ಲಿಸಿರುವವರಲ್ಲಿ ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡವರು, ಮಾಜಿ ಸಚಿವರು, ಶಾಸಕರು, ಹಾಲಿ ಶಾಸಕರು, ಹಿರಿಯ ರಾಜಕಾರಣಿಗಳ ಸಂಬಂಧಿಗಳು ಇದ್ದಾರೆ. ಅರ್ಜಿ ಸಲ್ಲಿಸಿರುವವ ಅನೇಕರು ಈಗಾಗಲೇ ಪಕ್ಷದ ಪ್ರಭಾವಿಗಳ ಹಿಂದೆ ಅಲೆದಾಡುತ್ತಿದ್ದು, ಟಿಕೆಟ್‌ ಪಡೆಯಲು ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.

ಉಳ್ಳಾಲ ಕ್ಷೇತ್ರದಿಂದ ಹಾಲಿ ಶಾಸಕ ಯು.ಟಿ.ಖಾದರ್, ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಬಯಸಿ ಮಾಜಿ ಶಾಸಕರಾದ ಜೆ.ಆರ್‌.ಲೋಬೊ, ಐವನ್ ಡಿಸೋಜ, ಶಾಲೆಟ್ ಪಿಂಟೊ, ಲಾರೆನ್ಸ್ ಡಿಸೋಜ, ಮೆರಿಲ್ ರೇಗೊ, ವಿಶ್ವಾಸ್‌ ಕುಮಾರ್ ದಾಸ್.

ಮಂಗಳೂರು ಉತ್ತರ ಕ್ಷೇತ್ರದಿಂದ ಮೊಹಿಯುದ್ದೀನ್ ಬಾವ, ಇನಾಯತ್ ಅಲಿ, ಅಲ್ತಾಫ್, ಲುಕ್ಮಾನ್, ಪ್ರತಿಭಾ ಕುಳಾಯಿ, ಕವಿತಾ ಸನಿಲ್, ಪುರುಷೋತ್ತಮ ಚಿತ್ರಾಪುರ, ಪದ್ಮನಾಭ, ಶಶಿಧರ್ ಹೆಗ್ಡೆ.

ಬಂಟ್ವಾಳ ಕ್ಷೇತ್ರದಿಂದ ರಮಾನಾಥ ರೈ, ರಾಕೇಶ್ ಮಲ್ಲಿ, ಅಶ್ವಿನ್‌ಕುಮಾರ್ ರೈ, ಬೆಳ್ತಂಗಡಿ ಕ್ಷೇತ್ರದ ಟಿಕೆಟ್‌ ಬಯಸಿ, ಗಂಗಾಧರ ಗೌಡ, ವಸಂತ್ ಬಂಗೇರ, ರಕ್ಷಿತ್ ಶಿವರಾಮ್ ಅರ್ಜಿ ಸಲ್ಲಿಸಿದ್ದಾರೆ.

ಪುತ್ತೂರು ಕ್ಷೇತ್ರದಿಂದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಎಂ.ಎಸ್.ಮೊಹಮ್ಮದ್, ಮಮತಾ ಗಟ್ಟಿ, ವಿಶ್ವನಾಥ ರೈ, ಭರತ್ ಮುಂಡೋಡಿ, ಧನಂಜಯ್ ಅಡ್ಪಂಗಾಯ, ಕೃಪಾ ಅಮರ್ ಆಳ್ವ, ಸತೀಶ್ ಕೆಳಂಜ, ಡಾ. ರಾಜಾರಾಮ್, ಕೌಶಲ್ ರೈ, ಮೂಡುಬಿದಿರೆ ಕ್ಷೇತ್ರದಿಂದ ಮಿಥುನ್ ರೈ, ರಾಜಶೇಖರ್ ಕೋಟ್ಯಾನ್, ಸುಳ್ಯ ಕ್ಷೇತ್ರದಿಂದ ನಂದಕುಮಾರ್, ಕೃಷ್ಣಪ್ಪ, ಪ್ರಲ್ಹಾದ್ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಿಪ್ಪಾಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.

‘ಒಂದಿಬ್ಬರು ಎರಡು ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿದ್ದು, ಒಂದಾದರೂ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಹಾಲಿ ಶಾಸಕರು ಹಾಗೂ ಇನ್ನು ಒಂದಿಬ್ಬರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ. ಯುವಕರು ಹಾಗೂ ಹಿರಿಯರು ಇಬ್ಬರನ್ನೂ ಸಮಾಧಾನಪಡಿಸುವ ರೀತಿಯಲ್ಲಿ ಟಿಕೆಟ್ ಹಂಚಿಕೆಯಾಗಲಿದೆ. ನ.25ರಂದು ಪಕ್ಷದ ಪ್ರಮುಖರಾದ ರಣದೀಪ್ ಸುರ್ಜಿವಾಲಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಅವರು ಟಿಕೆಟ್‌ ಆಕಾಂಕ್ಷಿಗಳನ್ನು ಬೆಂಗಳೂರಿಗೆ ಕರೆದಿದ್ದು, ಪರಸ್ಪರ ಮಾತುಕತೆ ನಡೆಸಲಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು.

ಪಕ್ಷದ ಹಿರಿಯರು ಹಿಂದೆ ನೀಡಿದ ಭರವಸೆಯಂತೆ ಜಿಲ್ಲೆಯಲ್ಲಿ ಮಹಿಳೆಯರಿಗೆ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲೇ ಬೇಕು. ಇದನ್ನು ಪಕ್ಷದ ಪ್ರಮುಖರ ಮುಂದೆಯೂ ಮಂಡಿಸುತ್ತೇವೆ.

- ಶಾಲೆಟ್‌ ಪಿಂಟೊ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.