ಮಂಗಳೂರು: ಮತ ಕಳ್ಳತನ ದೇಶದ ಅತಿ ದೊಡ್ಡ ಚುನಾವಣಾ ಹಗರಣವಾಗಿದ್ದು, ಇದರ ವಿರುದ್ಧ ಎಐಸಿಸಿ ಅ.15ರವರೆಗೆ ದೇಶವ್ಯಾಪಿ ‘ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ’ ಅಭಿಯಾನ ಆಯೋಜಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 5 ಸಾವಿರ ಸಹಿ ಸಂಗ್ರಹಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.
ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ಈ ಅಭಿಯಾನವು ರಾಜಕೀಯ ಕಾರ್ಯಕ್ರಮವಲ್ಲ. ಸಂವಿಧಾನ ರಕ್ಷಣೆ, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡುವ ನಿರ್ಣಾಯಕ ಹೆಜ್ಜೆಯಾಗಿದೆ. ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚು ಸಹಿ ಸಂಗ್ರಹಿಸಿ ಯಶಸ್ವಿಗೊಳಿಸಬೇಕು ಎಂದರು.
ಸೆ.24ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಂಗಳೂರಿಗೆ ಬರಲಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸಬೇಕು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಬಿ.ಎಲ್.ಎ- 2ಗಳ ಸಮಾವೇಶ ನಡೆಸಲಿದ್ದಾರೆ. ಇದರ ಪೂರ್ವಭಾವಿಯಾಗಿ ಸೆಪ್ಟೆಂಬರ್ ಒಳಗಾಗಿ ಆಯಾ ವಿಧಾನಸಭಾ ಕ್ಷೇತ್ರದ ಬಿ.ಎಲ್.ಎ.ಗಳಿಗೆ ತರಬೇತಿ ಶಿಬಿರ ಆಯೋಜಿಸಲು ಬ್ಲಾಕ್ ಅಧ್ಯಕ್ಷರು ಕ್ರಮವಹಿಸಬೇಕು ಎಂದು ತಿಳಿಸಿದರು.
ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ಮುಖಂಡರನ್ನು ಅಭಿನಂದಿಸಲಾಯಿತು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮುಖಂಡರಾದ ಬಿ.ರಮಾನಾಥ ರೈ, ಶಕುಂತಲಾ ಶೆಟ್ಟಿ, ಪದ್ಮರಾಜ್.ಆರ್, ಎಂ.ಎಸ್ ಮೊಹಮ್ಮದ್, ಸದಾಶಿವ್ ಉಳ್ಳಾಲ್, ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.