ಮಂಗಳೂರು: ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪೃಥ್ವಿರಾಜ ರೈ, 'ಬದುಕುವ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ಹೋರಾಡುವ ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಮರುಕಳಿಸುತ್ತಲೇ ಇವೆ. ವರ್ಷದ ಹಿಂದೆ ನಮ್ಮ ಜಿಲ್ಲೆಯ ಬಂಟ್ವಾಳದಲ್ಲಿ ವಕೀಲರೊಬ್ಬರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿತ್ತು. ಈ ಸಲ ಸ್ಥಳ ಮಾತ್ರ ಬೇರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ವಕೀಲರ ಧ್ವನಿಯನ್ನು ಹತ್ತಿಕ್ಕುವ ತಂತ್ರವಿದು. ಕರಿ ಕೋಟಿನ ಗೌರವ ರಕ್ಷಿಸಲು ಹೋರಾಟ ಅನಿವಾರ್ಯ’ ಎಂದರು.
‘ಪೊಲೀಸರು ಪ್ರತಿಭಟನೆ ನಡೆಸಲು ಇಲಾಖೆಯ ನಿಯಮಗಳ ಪ್ರಕಾರ ಅವಕಾಶ ಇಲ್ಲ. ಚಿಕ್ಕಮಗಳೂರಿನಲ್ಲಿ ಪೊಲೀಸರೇ ಪ್ರತಿಭಟನೆ ನಡೆಸಿದರೂ ಸರ್ಕಾರ ಕ್ರಮಕೈಗೊಂಡಿಲ್ಲ. ಇದು ಮುಖ್ಯಮಂತ್ರಿಯವರ ಗಮನಕ್ಕೆ ಬಂದಿಲ್ಲವೇ. ಈ ಬಗ್ಗೆ ವಿರೋಧ ಪಕ್ಷಗಳೂ ಏಕೆ ಧ್ವನಿ ಎತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.
ಸಂಘದ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, 'ವಕೀಲ ಪ್ರೀತಂ ಹೆಲ್ಮೆಟ್ ಧರಿಸದಿದ್ದರೆ ದಂಡ ಕಟ್ಟಿಸಿಕೊಳ್ಳಬೇಕಿತ್ತು. ಠಾಣೆಗೆ ಕರೆಸಿ ಕಂಪ್ಯೂಟರ್ ಕೊಠಡಿಯಲ್ಲಿ ಹಾಕಿ ಹಲ್ಲೆ ನಡೆಸಿದ್ದು ಏಕೆ. ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಬಳಿಕವಷ್ಟೇ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸ್ಥಾನದಲ್ಲಿರುವ ಪೊಲೀಸರನ್ನು ಅಮಾನತು ಮಾಡಲಾಗಿದೆಯೇ ಹೊರತು, ಅವರನ್ನು ಇನ್ನೂ ಬಂಧಿಸಿಲ್ಲ. ನ್ಯಾಯಾಲಯದ ನಿರ್ದೇಶನವನ್ನೂ ಗಾಳಿಗೆ ತೂರಿರುವ ಪೊಲೀಸರು ಈ ಪ್ರಕರಣದಲ್ಲಿ ನ್ಯಾಯಾಂಗದ ವ್ಯವಸ್ಥೆಗೆ ಚ್ಯುತಿ ತರುವಂತೆ ನಡೆದುಕೊಂಡಿದ್ದಾರೆ’ ಎಂದು ದೂರಿದರು.
ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್, 'ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆಯೇ ಒತ್ತಡ ಹೇರಿ, ಹಲ್ಲೆಗೊಳಗಾದ ವಕೀಲರ ಮೇಲೆಯೇ ಪೊಲೀಸ್ ಸಿಬ್ಬಂದಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಕೃತ್ಯವೆಸಗಿದ ಕಾರಣಕ್ಕೆ ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸಬೇಕು. ಪೊಲೀಸರು ಪ್ರತಿಭಟನೆ ನಡೆಸಿದ ಉದ್ದೇಶವಾದರೂ ಏನು. ಆರೋಪಿಯನ್ನು ಹೂಮಾಲೆ ಹಾಕಿ ಬರಮಾಡಿಕೊಂಡಿದ್ದು ಅಶಿಸ್ತಿನ ಪರಮಾವಧಿ. ಇಡೀ ಪ್ರಕರಣದ ಇಲಾಖಾ ವಿಚಾರಣೆ ನಡೆಯಬೇಕು’ ಎಂದು ಒತ್ತಾಯಿಸಿದರು.
ವಕೀಲ ಶಂಭು ಶರ್ಮ ಮಾತನಾಡಿ, 'ವಕೀಲರು ಕಕ್ಷಿದಾರರ ಪರವಾಗಿ ಠಾಣೆಗೆ ಹೋದಾಗ ಕೆಲ ಪೊಲೀಸ್ ಅಧಿಕಾರಿಗಳು ಕನಿಷ್ಠ ಗೌರವವನ್ನೂ ತೋರುವುದಿಲ್ಲ. ಹೆಲ್ಮೆಟ್ ಧರಿಸದಿರುವುದನ್ನೇ ನೆಪವಾಗಿಸಿ ವಕೀಲರೊಬ್ಬರಿಗೆ ತೀವ್ರ ಹಿಂಸೆ ನೀಡಿದ್ದಾರೆ. ಪೊಲೀಸರೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.