ಉಳ್ಳಾಲ: ಕೇಂದ್ರ ಸರ್ಕಾರವು ಸಾರ್ವಜನಿಕ ಸಾರಿಗೆಯ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಬಸ್ ತಯಾರಿಕಾ ಸಂಸ್ಥೆಗಳಿಗೆ ನೀಡಲು ಉದ್ದೇಶಿಸಿದೆ. ಕಾರ್ಯಾಚರಣೆಯ ಜತೆಗೆ ನಿರ್ವಾಹಕರು, ಚಾಲಕರ ನೇಮಕದಲ್ಲಿ ರಾಜ್ಯದ ಸಂಸ್ಥೆಗಳಿಗೆ ಅವಕಾಶ ನೀಡುವಂತೆ ಸಂಸದರು ಕೇಂದ್ರ ಸರ್ಕಾರದ ಮನವೊಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದರು.
ತಾಲ್ಲೂಕಿನ ಕಂಬಳಪದವು ಬಳಿ ಭಾನುವಾರ ನೂತನ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಸಂಸ್ಥೆಗಳ ಅಧೀನದಲ್ಲಿ ನಿರ್ವಾಹಕರು, ಚಾಲಕರನ್ನು ನೇಮಕ ಮಾಡಿದಾಗ ಜವಾಬ್ದಾರಿಯ ಪ್ರಶ್ನೆ ಮೂಡುವುದು ಸಹಜ. ಟಾಟಾ ಸಂಸ್ಥೆಯನ್ನು ಹೊರತುಪಡಿಸಿ ಉಳಿದ ಸಂಸ್ಥೆಗಳ ಕುರಿತು ಉತ್ತಮ ಅಭಿಪ್ರಾಯಗಳಿಲ್ಲ. ರಾಜ್ಯದ ಸಂಸ್ಥೆಗಳ ಜವಾಬ್ದಾರಿಯಲ್ಲಿ ಕೇಂದ್ರ ಸರ್ಕಾರದ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ನಡೆಸಿದಾಗ ಸಾರ್ವಜನಿಕರಿಗೆ ಸುಗಮ ಸೇವೆಗಳ ಜತೆಗೆ ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸಬಹುದು ಎಂದರು.
ಕೇಂದ್ರದಲ್ಲಿ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯಗಳಿಗೆ ಎಲೆಕ್ಟ್ರಿಕ್ ಬಸ್ ಕೊಡುವ ಯೋಜನೆ ರೂಪಿಸಲಾಗಿತ್ತು. ಆ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ 50, ರಾಜ್ಯ ಸರ್ಕಾರ ಹಾಗೂ ಆಯಾ ರಾಜ್ಯದ ಸಾರಿಗೆ ಇಲಾಖೆಯಿಂದ ಶೇ 50 ಅನುದಾನ ಭರಿಸುವ ಯೋಜನೆ ಇತ್ತು. ಆದರೆ ಈಗ ಕೇಂದ್ರ ಸರ್ಕಾರದ ನಿಯಮಗಳಡಿ ಹೆಚ್ಚಿನ ಅವಕಾಶ ನೇರವಾಗಿ ಬಸ್ ತಯಾರಿಕೆ ಸಂಸ್ಥೆಗಳಿಗೆ ಸಿಗುವುದರಿಂದ ರಾಜ್ಯ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಕೈತಪ್ಪುತ್ತದೆ ಎಂದು ಹೇಳಿದರು.
ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಇತ್ತೀಚೆಗೆಯಷ್ಟೇ ಕಂಬಳಪದವು ಬಳಿ ನೂತನ ಅಗ್ನಿಶಾಮಕ ಠಾಣೆಗೆ ಶಿಲಾನ್ಯಾಸ ನಡೆದಿದ್ದು, ಇದೀಗ ನೂತನ ವಿದ್ಯುನ್ಮಾನ ಟ್ರ್ಯಾಕ್‌ನ ಚಾಲನಾ ಕೇಂದ್ರವು ಕೂಡ ಈ ಭಾಗದಲ್ಲಿ ಉದ್ಘಾಟನೆಗೊಳ್ಳುವ ಮೂಲಕ ಈ ಪ್ರದೇಶದ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಮಮತಾ ಡಿಎಸ್ ಗಟ್ಟಿ, ಮುಖಂಡರಾದ ಎ.ಸಿ.ಭಂಡಾರಿ, ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಎನ್ ವಿ ಪ್ರಸಾದ್, ಸಾರಿಗೆ ರಸ್ತೆ ಮತ್ತು ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್, ಹೆಚ್ಚುವರಿ ಸಾರಿಗೆ ಆಯುಕ್ತ ಬಿ.ಪಿ.ಉಮಾಶಂಕರ್, ವಿಭಾಗ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ, ಶಿವಮೊಗ್ಗದ ಜಂಟಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್, ದ.ಕ.ಉಪ ಸಾರಿಗೆ ಆಯುಕ್ತ ಶ್ರೀಧರ ಮಲ್ನಾಡ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್ ವಿಶ್ವನಾಥ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್, ಅಕ್ರಮ ಸಕ್ರಮ ಸಮಿತಿಯ ಚಂದ್ರಹಾಸ್ ಕರ್ಕೇರ, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಸರ್ಕಾರದ ವತಿಯಿಂದ ಲ್ಯಾಪ್‌ಟಾಪ್‌ಗಳನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು.
ಹೆಚ್ಚುವರಿ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ ಸ್ವಾಗತಿಸಿದರು. ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ರಫೀಕ್ ವಂದಿಸಿದರು. ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ವಿದ್ಯುನ್ಮಾನ ಟ್ರ್ಯಾಕ್ ಉದ್ಘಾಟನೆ ಮೂಲಕ ಬಹಳ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಎಲೆಕ್ಟ್ರಿಕ್ ಬಸ್‌ಗಳು ಶೀಘ್ರದಲ್ಲೇ ಜಿಲ್ಲೆಗೆ ಬರಲಿವೆ.ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದ
‘ಎಲ್ಲೆಡೆ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ’
₹42 ಕೋಟಿ ವೆಚ್ಚದಲ್ಲಿ ಬೀದರ್ ಕಲಬುರಗಿ ಯಾದಗಿರಿ ಚಂದಾಪುರ ಕೆಜಿಎಫ್ ಮತ್ತು ಬೆಳಗಾವಿ ಸೇರಿ ಒಟ್ಟು 6 ಸ್ಥಳಗಳಲ್ಲಿ ಪ್ರಾದೇಶಿಕ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ₹ 28 ಕೋಟಿ ವೆಚ್ಚದಲ್ಲಿ ರಾಣಿ ಬೆನ್ನೂರು ಗೋಕಾಕ್ ಸಕಲೇಶಪುರ ಕಚೇರಿ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮಧುಗಿರಿ ಮತ್ತು ಹೊನ್ನಾವರ ಕಚೇರಿ ಕಟ್ಟಡದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ರಾಜ್ಯದ ಸಾರಿಗೆ ಇಲಾಖೆಯ ಪ್ರತಿ ಅಧೀನ ಕಚೇರಿಗಳಿಗೂ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಹೊಂದರುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಜ್ಞಾನಭಾರತಿ ಎಲೆಕ್ಟ್ರಾನಿಕ್ ಸಿಟಿ ಮೈಸೂರು ಕಲಬುರಗಿ ಧಾರವಾಡ ಶಿವಮೊಗ್ಗ ಮತ್ತು ಹಾಸನ ಕಚೇರಿಗಳ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಅವು ಕಾರ್ಯನಿರ್ವಹಿಸುತ್ತಿವೆ. ಇದೇ ಮಾದರಿಯಲ್ಲಿ ಪ್ರಸ್ತುತ ಮಂಗಳೂರಿನಲ್ಲಿ ₹7.5 ಕೋಟಿಗಳ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟನೆಗೊಂಡಿದೆ.
ಬೆಳಗಾವಿ ಮತ್ತು ರಾಯಚೂರಿನಲ್ಲಿ ₹ 16 ಕೋಟಿಗಳ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗಿದ್ದು ಸದರಿ ಪಥಗಳಲ್ಲಿ ಸೆನ್ಸಾರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ₹ 80 ಕೋಟಿಗಳ ವೆಚ್ಚದಲ್ಲಿ ದೇವನಹಳ್ಳಿ ಕೋಲಾರ ಹೊಸಪೇಟೆ ಗದಗ ಬಳ್ಳಾರಿ ವಿಜಯಪುರ ಬೀದರ್ ಯಾದಗಿರಿ ದಾವಣಗೆರೆಗಳಲ್ಲಿ ಡ್ರೈವಿಂಗ್ ಟ್ರ‍್ಯಾಕ್‌ಗಳನ್ನು ನಿರ್ಮಿಸಲಾಗುತ್ತಿದೆ.₹ 71 ಕೋಟಿ ವೆಚ್ಚದಲ್ಲಿ ನಾಗಮಂಗಲ ಯಲಹಂಕ ಶಿರಸಿ ಸಕಲೇಶಪುರ ಕೆಜಿಎಫ್ ಚಿಂತಾಮಣಿ ಸಾಗರ ಗೋಕಾಕ್ ರಾಣೆಬೆನ್ನೂರು ದಾಂಡೇಲಿ ಭಾಲ್ಕಿ ಮತ್ತು ಬೈಲಹೊಂಗಲದಲ್ಲಿ ಡ್ರೈವಿಂಗ್ ಟ್ರ‍್ಯಾಕ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.