ADVERTISEMENT

ಟೆಲಿಮೆಡಿಸಿನ್‌ ಸೇವೆ ಆರಂಭ

ಸಾರ್ವಜನಿಕರ ನೆರವಿಗೆ ಬಂದ ಕೆ.ಎಸ್‌.ಹೆಗ್ಡೆ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 16:22 IST
Last Updated 28 ಮಾರ್ಚ್ 2020, 16:22 IST

ಮಂಗಳೂರು: ಇಲ್ಲಿನ ದೇರಳಕಟ್ಟೆಯಲ್ಲಿರುವ ನಿಟ್ಟೆ ಡೀಮ್ಡ್‌ ಟು ಬಿ ವಿಶ್ವವಿದ್ಯಾಲಯದ ನ್ಯಾಯಮೂರ್ತಿ ಕೆ.ಎಸ್‌.ಹೆಗ್ಡೆ ಚಾರಿಟಬಲ್‌ ಆಸ್ಪತ್ರೆಯು ಲಾಕ್‌ಡೌನ್‌ ಅವಧಿಯಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಜನರಿಗಾಗಿ ಶನಿವಾರದಿಂದ ಟೆಲಿಮೆಡಿಸಿನ್‌ ಸೇವೆಯನ್ನು ಆರಂಭಿಸಿದೆ.

ಪ್ರತಿನಿತ್ಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಟೆಲಿಮೆಡಿಸಿನ್‌ ಕ್ಲಿನಿಕ್‌ ಸೇವೆ ಲಭ್ಯವಿರುತ್ತದೆ. ಜನರಲ್‌ ಮೆಡಿಸಿನ್‌, ಮಕ್ಕಳ ತಜ್ಞರು, ಚರ್ಮರೋಗ, ಮನೋರೋಗ, ನರರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞರು ಮತ್ತು ಮೂಳೆ ಶಸ್ತ್ರಚಿಕಿತ್ಸಾ ವಿಭಾಗದ 13 ವೈದ್ಯರು ಈ ಕ್ಲಿನಿಕ್‌ನಲ್ಲಿ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಎಲ್ಲ ವೈದ್ಯರಿಗೂ ಪ್ರತ್ಯೇಕವಾದ ಮೊಬೈಲ್‌ ಸಂಖ್ಯೆಗಳನ್ನು ನೀಡಲಾಗಿದೆ. ಈ ಸಂಖ್ಯೆಗಳ ವಾಟ್ಸ್‌ಆ್ಯಪ್‌ಗೆ ರೋಗಿಯ ಹೆಸರು, ವಯಸ್ಸು, ಲಿಂಗ ಮತ್ತು ಸಮಸ್ಯೆಯ ಮಾಹಿತಿ ಕಳುಹಿಸಬೇಕು. ಹಿಂದಿನ ಚಿಕಿತ್ಸೆಯ ದಾಖಲೆಗಳಿದ್ದರೆ ಅವನ್ನೂ ಕಳಿಸಬೇಕು. ಮಕ್ಕಳ ವಿಭಾಗಕ್ಕೆ ಕಳುಹಿಸುವವರು ಮಗುವಿನ ತೂಕದ ಮಾಹಿತಿಯನ್ನೂ ಒದಗಿಸಬೇಕು.

ADVERTISEMENT

ನೇರವಾಗಿ ವೈದ್ಯರಿಗೆ ಕರೆ ಮಾಡುವಂತಿಲ್ಲ. ವಾಟ್ಸ್‌ಆ್ಯಪ್‌ ಮೂಲಕವೇ ಮಾಹಿತಿ ನೀಡಬೇಕು. ವೈದ್ಯರು ಅವುಗಳನ್ನು ಪರಿಶೀಲಿಸಿ ಸೂಕ್ತ ಸಲಹೆ ನೀಡುತ್ತಾರೆ. ಔಷಧಿಗಳ ಕುರಿತು ವಾಟ್ಸ್‌ಆ್ಯಪ್‌ ಮೂಲಕವೇ ಸೂಚನೆ ನೀಡುತ್ತಾರೆ. ಅಗತ್ಯ ಇದ್ದರೆ ಅವರೇ ರೋಗಿಗಳ ಮೊಬೈಲ್‌ಗೆ ಕರೆ ಮಾಡಿ, ಮಾತನಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಸ್ಥಿರ ದೂರವಾಣಿ ಸಂಖ್ಯೆ 0824–2204451 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.