ADVERTISEMENT

ಮಂಗಳೂರು: ಕೋವಿಡ್‌–19 ಸೋಂಕಿನಿಂದ ಹೊರಬಂದ ಹಾಲುಗಲ್ಲದ ಹಸುಳೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 19:45 IST
Last Updated 11 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕೋವಿಡ್‌–19 ಸೋಂಕಿನಿಂದ ಬಳಲುತ್ತಿದ್ದ ಬಂಟ್ವಾಳ ತಾಲ್ಲೂಕಿನ ಸಜಿಪನಡು ಗ್ರಾಮದ ಹತ್ತು ತಿಂಗಳ ಮಗುವನ್ನು ಸಂಪೂರ್ಣವಾಗಿ ಸೋಂಕಿನಿಂದ ಹೊರತರುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಹೊಂದಿದ ಮಗು, ಮರಳಿ ಮನೆ ಸೇರಿದೆ.

‘ಮಗುವನ್ನು ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನಲ್ಲಿ ಕೋವಿಡ್‌–19 ಸೋಂಕು ಇರುವುದು ಮಾರ್ಚ್ 25ರಂದು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್‌ 7 ಮತ್ತು 8ರಂದು ಪುನಃ ಮಗುವಿನ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಎರಡೂ ಮಾದರಿಗಳ ವರದಿಗಳು ನೆಗೆಟಿವ್‌ ಬಂದಿವೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಮನೆಗೆ ಕಳುಹಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಎದೆ ಹಾಲು ಕುಡಿಯುತ್ತಿರುವ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿರುವುದು ವೈದ್ಯರು ಮತ್ತು ಜಿಲ್ಲಾಡಳಿತದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹಾಲುಗಲ್ಲದ ಹಸುಳೆಯನ್ನು ತಾಯಿಯಿಂದ ಪ್ರತ್ಯೇಕಿಸಿ, ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುವುದು ವೈದ್ಯರ ಪಾಲಿಗೆ ಸವಾಲಾಗಿತ್ತು.

ADVERTISEMENT

‘ಜಿಲ್ಲೆಯ ವೈದ್ಯರ ಪಾಲಿಗೆ ಇದು ಒಂದು ವಿಶಿಷ್ಟ ಪ್ರಕರಣವಾಗಿತ್ತು. ರಾಜ್ಯದಲ್ಲಿ ಎದೆ ಹಾಲು ಕುಡಿಯುವ ಮಗುವಿನಲ್ಲಿ ಸೋಂಕು ಪತ್ತೆಯಾದ ಮೊದಲ ಪ್ರಕರಣ ಇದು. ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ ವೈದ್ಯರು ಜೊತೆಗೂಡಿ ಮಗುವನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಿ ಗುಣಮಟ್ಟದ ಚಿಕಿತ್ಸೆ ನೀಡಿದ್ದಾರೆ. ಸೂಕ್ಷ್ಮವಾದ ಪ್ರಕರಣವನ್ನು ನಾಜೂಕಿನಿಂದ ನಿರ್ವಹಿಸಿದ್ದು ಯಶಸ್ಸಿಗೆ ಕಾರಣ’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ತಾಯಿ, ಅಜ್ಜಿಯ ವರದಿಗಳೂ ನೆಗೆಟಿವ್‌: ಮಗುವಿನ ತಾಯಿ ಮತ್ತು ಅಜ್ಜಿಯನ್ನೂ ಆಸ್ಪತ್ರೆಗೆ ದಾಖಲಿಸಿ, ನಿಗಾ ಇರಿಸಲಾಗಿತ್ತು. ಅವರ ಗಂಟಲಿನ ದ್ರವದ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ‘ನೆಗೆಟಿವ್‌’ ಎಂಬ ವರದಿಗಳು ಬಂದಿವೆ. ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 12 ಮಂದಿಯಲ್ಲಿ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿತ್ತು. ಈ ಪೈಕಿ ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರೋಗಿಗಳ ಚಿಕಿತ್ಸೆಯಲ್ಲಿ ಶೇಕಡ 50ರಷ್ಟು ಪ್ರಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

‘ಕೊರೊನಾ ವೈರಸ್‌ ಸೋಂಕು ಖಚಿತಪಡಿಸಿಕೊಳ್ಳಲು ಜಿಲ್ಲೆಯಲ್ಲಿ ಈವರೆಗೆ 436 ಮಂದಿಯ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 402 ಮಾದರಿಗಳ ವರದಿಗಳು ಬಂದಿವೆ. 12 ಮಂದಿಯಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. 390 ಮಂದಿಯಲ್ಲಿ ಸೋಂಕು ಇಲ್ಲ ಎಂಬ ವರದಿಗಳು ಬಂದಿವೆ’ ಎಂದು ಮಾಹಿತಿ ನೀಡಿದ್ದಾರೆ.

ಶನಿವಾರ 46 ಮಾದರಿಗಳ ವರದಿಗಳು ಬಂದಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ. ಶನಿವಾರ ಇನ್ನೂ 34 ಮಾದರಿಗಳನ್ನು ಸಂಗ್ರಹಿಸಿದ್ದು, ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಸತತ ಏಳನೇ ದಿನ ಹೊಸದಾಗಿ ಯಾವುದೇ ಕೋವಿಡ್‌–19 ಸೋಂಕು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 52 ಮಂದಿಯನ್ನು ಶನಿವಾರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 38,865 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. 3,347 ಜನರು 28 ದಿನಗಳ ಅವಧಿಯ ಹೋಂ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. 2,598 ಜನರು ಇನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದ್ದಾರೆ.

ಎಂಟು ಮಂದಿ ಐಸೋಲೇಷನ್‌ಗೆ
ಕೋವಿಡ್‌–19 ಸೋಂಕಿನ ಲಕ್ಷಣಗಳು ಕಂಡುಬಂದ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಜನರನ್ನು ನಗರದ ಇಎಸ್‌ಐ ಆಸ್ಪತ್ರೆಯ ಐಸೋಲೇಷನ್‌ ಕೇಂದ್ರಕ್ಕೆ ಶನಿವಾರ ದಾಖಲು ಮಾಡಲಾಗಿದೆ. ಇದರೊಂದಿಗೆ ಅಲ್ಲಿ ಐಸೋಲೇಷನ್‌ ವಾರ್ಡ್‌ನಲ್ಲಿ ಇರುವವರ ಸಂಖ್ಯೆ 23ಕ್ಕೇರಿದೆ.

ಜಿಲ್ಲೆಯ ಜ್ವರ ಕ್ಲಿನಿಕ್‌ಗಳಿಗೆ ತಪಾಸಣೆಗೆ ಬಂದಿದ್ದ ಎಂಟು ಮಂದಿಯನ್ನು ಐಸೋಲೇಷನ್‌ ಕೇಂದ್ರದಲ್ಲಿ ನಿಗಾದಲ್ಲಿ ಇರಿಸುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಈ ಕಾರಣದಿಂದ ಎಂಟು ಮಂದಿಯನ್ನೂ ಇಎಸ್‌ಐ ಆಸ್ಪತ್ರೆಯ ಐಸೋಲೇಷನ್‌ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.