ADVERTISEMENT

ಭ್ರಷ್ಟಾಚಾರ: ತಹಶೀಲ್ದಾರ್‌ ಪುರಂದರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 20:07 IST
Last Updated 30 ಸೆಪ್ಟೆಂಬರ್ 2022, 20:07 IST
ಪುರಂದರ
ಪುರಂದರ   

ಮಂಗಳೂರು: ಜಾಗ ಮಾರಾಟಕ್ಕೆ ಸಂಬಂಧಿಸಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಲಂಚ ಪಡೆದ ಆರೋಪದ ಮೇರೆಗೆ ಮಂಗಳೂರು ತಹಶೀಲ್ದಾರ್‌ ಪುರಂದರ ಹಾಗೂ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಿವಾನಂದ ನಾಟ್ಯಾಕರ್‌ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನಗರದ ಕಾವೂರು ನಿವಾಸಿಯೊಬ್ಬರು ಜಾಗ ಮಾರಾಟಕ್ಕೆ ಎನ್ಓಸಿ ನೀಡುವಂತೆ ತಹಶೀಲ್ದಾರ್‌ಗೆ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ‘ಕೆಲಸ ಮಾಡಿಕೊಡಬೇಕಾದರೆ ತನಗೆ ಹಾಗೂ ತಹಶೀಲ್ದಾರ್‌ಗೆ ಲಂಚ ಕೊಡಬೇಕು ಎಂದು ಶಿವಾನಂದ ಬೇಡಿಕೆ ಇಟ್ಟಿದ್ದಾರೆ‘ ಎಂಬುದಾಗಿ ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

‘ಅರ್ಜಿದಾರರಿಂದ ₹ 4,700 ಲಂಚದ ಹಣ ಪಡೆದ ಶಿವಾನಂದ ಅವರನ್ನು ಬಂಧಿಸಿದ್ದೇವೆ. ಲಂಚದ ಹಣದಲ್ಲಿ ತಹಶೀಲ್ದಾರ್ ಅವರಿಗೂ ಪಾಲು ಇತ್ತು. ಹಾಗಾಗಿ ತಹಶೀಲ್ದಾರ್‌ ಪುರಂದರ ಅವರನ್ನೂ ಬಂಧಿಸಿದ್ದೇವೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದೇವೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್‌ ತಿಳಿಸಿದ್ದಾರೆ. ಪುರಂದರ, ವಿಜಯಪುರ ಜಿಲ್ಲೆ ಗುಣಕಿ ಗ್ರಾಮದವರು. ಶಿವಾನಂದ ಬಂಟ್ವಾಳ ತಾಲ್ಲೂಕಿನ ಬಿ.ಮೂಡಾ ಗ್ರಾಮದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.