ADVERTISEMENT

ಕಾರ್ಮಿಕನ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 11:13 IST
Last Updated 13 ಮಾರ್ಚ್ 2020, 11:13 IST

ಮಂಗಳೂರು: ಬಿಹಾರದ ಕಟ್ಟಡ ಕಾರ್ಮಿಕ ಅಜಯ್ ಕುಮಾರ್ ಚೌಧರಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ನಾಲ್ವರು ಆರೋಪಿಗಳಿಗೆ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.

ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಬಂಡಾರು ಗ್ರಾಮದ ಶಶಿಶೇಖರ್ ಯಾದವ್, ಮಂಗಾರು ಯಾದವ್, ರಿತೇಶ್ ಯಾದವ್, ಜಿತೇಂದರ್ ಯಾದವ್ ಶಿಕ್ಷೆಗೊಳಗಾದವರು.

ನಗರದ ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ ಕ್ಯಾಂಪಸ್‌ ಕಟ್ಟಡದ ಕೆಲಸಕ್ಕೆ ಈ ನಾಲ್ವರು ಬಂದಿದ್ದರು. ಕಟ್ಟಡದ ಕಾಮಗಾರಿಯನ್ನು ಸುಖದೇವ್ ಕಂಪನಿಯು ವಹಿಸಿಕೊಂಡಿದ್ದು, ಇವರು ಬೇರೆ ಬೇರೆ ರಾಜ್ಯಗಳಿಂದ ಕಟ್ಟಡ ಕಾರ್ಮಿಕರನ್ನು ಕರೆಸಿದ್ದರು. ಅವರಿಗೆ ಉಳಿದುಕೊಳ್ಳಲು ಸುರತ್ಕಲ್ ಸಮೀಪ ಶೆಡ್‌ಗಳನ್ನು ನಿರ್ಮಿಸಿದ್ದರು.

ADVERTISEMENT

2018 ಮಾರ್ಚ್‌ 11ರಂದು ಸಂಜೆ ಶಶಿಶೇಖರ್ ಯಾದವ್, ತನ್ನ ಕೋಣೆಯ ಮುಂಭಾಗ ನಿಂತು ‘ನನ್ನ ಮೊಬೈಲ್ ಫೋನ್‌ ಒಡೆದವರು ಯಾರು?’ ಎಂದು ಕಿರಿಚಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಳಿದ ಮೂವರೂ ಆರೋಪಿಗಳು ಸೇರಿ ಆತನೊಂದಿಗೆ ಮೊಬೈಲ್ ಫೋನ್ ಒಡೆದಿರುವ ಬಗ್ಗೆ ಚರ್ಚಿಸುತ್ತಿದ್ದರು. ಈ ವಿಷಯದಲ್ಲಿ ಕಿರಿಚಾಡದಂತೆ ಸಲಹೆ ನೀಡಲು ಬಂದಿದ್ದ ಅದೇ ಕಂಪನಿಯಲ್ಲಿ ಕಾರ್ಮಿಕ, ಬಿಹಾರದ ಕದಾರಿಯಾ ಜಿಲ್ಲೆಯ ಶಿಷ್ಟಾ ಗ್ರಾಮದ ಅಜಯ್ ಕುಮಾರ್ ಚೌಧುರಿ ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸೈದುನ್ನೀಸಾ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಜಯರಾಂ ಶೆಟ್ಟಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.