ADVERTISEMENT

ದಕ್ಷಿಣ ಕನ್ನಡ: ತಾಯಿ, ಮಗನಿಗೆ ಕೋವಿಡ್‌ ಸೋಂಕು ದೃಢ

ಫಸ್ಟ್‌ ನ್ಯೂರೊ ಆಸ್ಪತ್ರೆಯ ಸಂಪರ್ಕದಿಂದ ಹರಡಿದ ವೈರಾಣು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 16:07 IST
Last Updated 27 ಏಪ್ರಿಲ್ 2020, 16:07 IST
ಮಂಗಳೂರು ನಗರದ ವ್ಯಾಪ್ತಿಯ ಶಕ್ತಿನಗರ ಪ್ರದೇಶವನ್ನು ಸೋಮವಾರ ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಿರುವುದು– ಪ್ರಜಾವಾಣಿ ಚಿತ್ರ
ಮಂಗಳೂರು ನಗರದ ವ್ಯಾಪ್ತಿಯ ಶಕ್ತಿನಗರ ಪ್ರದೇಶವನ್ನು ಸೋಮವಾರ ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಿರುವುದು– ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದ ಶಕ್ತಿನಗರ ನಿವಾಸಿಗಳಾಗಿರುವ ತಾಯಿ (80 ವರ್ಷ) ಮತ್ತು ಮಗನಿಗೆ (45 ವರ್ಷ) ಕೋವಿಡ್‌–19 ಸೋಂಕು ತಗಲಿರುವುದು ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೇರಿದೆ.

‘ಶಕ್ತಿನಗರ ನಿವಾಸಿಗಳಾಗಿರುವ 80 ವರ್ಷ ವಯಸ್ಸಿನ ಮಹಿಳೆ (ಪಿ–507) ಮತ್ತು 45 ವರ್ಷ ವಯಸ್ಸಿನ ಅವರ ಮಗನ (ಪಿ–506) ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ವರದಿಗಳು ಲಭಿಸಿದ್ದು, ಇಬ್ಬರಿಗೂ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.‌

ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಂಟ್ವಾಳದ ಕಸಬಾ ಗ್ರಾಮದ 78 ವರ್ಷ ವಯಸ್ಸಿನ ಮಹಿಳೆಯೊಬ್ಬರು (ಪಿ–432) ದಾಖಲಾಗಿದ್ದರು. ಅವರು ಕೋವಿಡ್‌–19 ಸೋಂಕಿನಿಂದ ಮೃತಪಟ್ಟಿದ್ದರು. ಅವರ ಪಕ್ಕದ ಹಾಸಿಗೆಯಲ್ಲೇ ಪಿ–507 ಅವರನ್ನೂ ದಾಖಲಿಸಲಾಗಿತ್ತು. ಒಂದೇ ಕೋಣೆಯಲ್ಲಿ ಇಬ್ಬರೂ ರೋಗಿಗಳಿದ್ದರು. ಪಿ–507ರ ಸಹಾಯಕನಾಗಿ ಅವರ ಮಗ (ಪಿ–506) ಇದ್ದರು. ಪಿ–432 ಅವರ ಸಂಪರ್ಕದಿಂದಲೇ ತಾಯಿ ಮತ್ತು ಮಗ ಇಬ್ಬರಿಗೂ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

ಬಂಟ್ವಾಳದ ಕಸಬಾ ಗ್ರಾಮದ 50 ವರ್ಷದ ಮಹಿಳೆ (ಪಿ–390) ಕೋವಿಡ್‌–19 ಸೋಂಕಿನಿಂದ ಏಪ್ರಿಲ್‌ 19ರಂದು ಮೃತಪಟ್ಟಿದ್ದರು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಅತ್ತೆಗೂ (ಪಿ–432) ಸೋಂಕು ತಗಲಿತ್ತು. ಅವರು ಏಪ್ರಿಲ್‌ 23ರಂದು ಮೃತಪಟ್ಟಿದ್ದರು. ಈಗ ಈ ಕುಟುಂಬದ ಜೊತೆ ಸಂಪರ್ಕದಲ್ಲಿದ್ದವರಲ್ಲಿ ಸೋಂಕಿನ ಸರಣಿ ಮುಂದುವರಿದಿದೆ.

ಸೋಂಕಿತರ ಸಂಖ್ಯೆ 21ಕ್ಕೆ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿನ ಮೊದಲ ಪ್ರಕರಣ ಮಾರ್ಚ್‌ 22ರಂದು ಪತ್ತೆಯಾಗಿತ್ತು. ಆ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಮವಾರ ಎರಡು ಪ್ರಕರಣಗಳು ದೃಢಪಟ್ಟಿರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೇರಿದೆ.

ಈವರೆಗೆ 12 ಮಂದಿ ಕೋವಿಡ್‌–19 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಪರ್ಕಿತರ ಪತ್ತೆ:ಸೋಮವಾರ ಸೋಂಕು ದೃಢಪಟ್ಟಿರುವ ಇಬ್ಬರ ಪ್ರಯಾಣದ ಮಾರ್ಗ ಹಾಗೂ ಸಂಪರ್ಕಿತರ ವಿವರಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಕಲೆಹಾಕುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಈ ಇಬ್ಬರೂ ಸಂಪರ್ಕಿತರ ಓಡಾಟ ಆಸ್ಪತ್ರೆ ಮತ್ತು ಮನೆಗೆ ಸೀಮಿತವಾಗಿತ್ತು. ಈವರೆಗೆ ಆರು ಮಂದಿ ಪ್ರಾಥಮಿಕ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಎಲ್ಲರನ್ನೂ ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಂಟ್ವಾಳ ಕಸಬಾ ಮತ್ತು ಶಕ್ತಿನಗರ ಪ್ರಕರಣಗಳ ಬಳಿಕ ಹೆಚ್ಚಿನ ಸಂಖ್ಯೆ ಜನರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಸೋಮವಾರ 296 ಮಾದರಿಗಳ ವರದಿಗಳು ಬಂದಿವೆ. ಇನ್ನೂ 340 ಮಾದರಿಗಳ ವರದಿಗಳಿಗಾಗಿ ಕಾಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.