ADVERTISEMENT

ಬಿಗಿ ಕ್ರಮ: ಗಡಿಭಾಗ ವಿದ್ಯಾರ್ಥಿಗಳು ಕಂಗಾಲು

ಮಂಗಳೂರು ವಿವಿಯ ಸೆಮಿಸ್ಟರ್ ಪರೀಕ್ಷೆ ಇಂದು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 2:57 IST
Last Updated 2 ಆಗಸ್ಟ್ 2021, 2:57 IST

ಉಳ್ಳಾಲ: ಮಂಗಳೂರು ವಿಶ್ವವಿದ್ಯಾ ಲಯದ ಸೆಮಿಸ್ಟರ್ ಪರೀಕ್ಷೆಗಳು ಸೋಮ ವಾರ ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿರುವ ಹೊಸ ಮಾರ್ಗಸೂಚಿಯಿಂದಾಗಿ ಪರೀಕ್ಷೆ ಬರೆಯಬೇಕಾದ ಗಡಿಭಾಗದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

‘ಸಂಬಂಧಿಕರ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ, ಎರಡನೇ ಡೋಸ್ ಲಸಿಕೆ ಕೂಡಾ ಆಗಿಲ್ಲ, ಪ್ರತ್ಯೇಕವಾಗಿ ಪರೀಕ್ಷೆ ಬರೆಯುವುದು ಆಗದ ವಿಚಾರ’ ಇದು ಗಡಿಭಾಗ ಕೇರಳ ನಿವಾಸಿ, 3ನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಾದ ಮಂಗಳೂರು ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿಯ ಅಳಲು.

ಕಾಸರಗೋಡು ಬೇಕಲ ನಿವಾಸಿಯಾಗಿರುವ ಸ್ಫೂರ್ತಿ ಕಮಲ್ ಪಿ.ಎಸ್. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಬಿ.ಎ. ಪತ್ರಿಕೋದ್ಯಮ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿ. ಅವರು ಆಗಸ್ಟ್ 3ರಿಂದ ಆರಂಭವಾಗುವ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಿತ್ತು. ಆದರೆ, ಜಿಲ್ಲಾಡಳಿತ ಗಡಿಭಾಗದಲ್ಲಿ ಹೇರಿರುವ ಹಲವು ನಿರ್ಬಂಧಗಳಿಂದ ಅವರಿಗೆ ತೊಂದರೆಯಾಗಿದೆ.

ADVERTISEMENT

‘ತನ್ನಂತೆಯೇ ಉಪ್ಪಳ, ಕುಂಬಳೆ, ಪಳ್ಳಿಕೆರೆ ಭಾಗದಿಂದ ಹಲವು ವಿದ್ಯಾರ್ಥಿ ಗಳು ಪರೀಕ್ಷೆ ಬರೆಯುವವರಿದ್ದಾರೆ. ಅವರಿಗೂ ಇದೇ ಸಮಸ್ಯೆ. ಹಾಗಾಗಿ, ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ಮಾನಸಿಕ ಆಘಾತಕ್ಕೆ ಒಳಗಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು’ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.

ಪರೀಕ್ಷೆ ಬರೆಯುವುದೇ ಹಿಂಸೆ: ವಿದ್ಯಾರ್ಥಿಗಳಲ್ಲಿ 78 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್ ವರದಿ ತರಬೇಕೆಂದು ಜಿಲ್ಲಾಡಳಿತ ಹೇಳಿದೆ. ಇವತ್ತು ಗಂಟಲ ದ್ರವ ಪರೀಕ್ಷೆಗೆ ನೀಡಿದರೂ ನಾಳೆಗೆ ವರದಿ ಸಿಗುವುದಿಲ್ಲ. ನಾಳೆಯೇ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಮಗನಿಗೆ ಮೊದಲ ಸೆಮಿಸ್ಟರ್ ಪರೀಕ್ಷೆಯಿದೆ. ಇಷ್ಟು ಸಮಯದಿಂದ ಓದಿ, ಇದೀಗ ಪರೀಕ್ಷೆ ಎದುರಿಸಲು ಹೋಗುವಾಗ ಅನೇಕ ತೊಂದರೆಗಳಿಂದ ಮಗನ ಮನಸ್ಸಿಗೂ ನೋವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ನಿಯಮಗಳನ್ನು ಜಾರಿ ಮಾಡಬೇಕಿದೆ’ ಎಂದು ಬೆಜ್ಜ ಹೊಸಂಗಡಿ ನಿವಾಸಿ ವಿದ್ಯಾರ್ಥಿಯ ತಾಯಿ ಶೋಭಾ ಕೆ. ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.