ADVERTISEMENT

ಗರ್ಭಿಣಿ, ಬಾಣಂತಿಯರಲ್ಲಿ ಸೋಂಕು ಹೆಚ್ಚಳ

ಒಂದು ವಾರದಲ್ಲಿ 20 ಜನರಿಗೆ ಕೋವಿಡ್ ದೃಢ, ವಿಶೇಷ ಕಾಳಜಿ ಅಗತ್ಯ

ಸಂಧ್ಯಾ ಹೆಗಡೆ
Published 9 ಮೇ 2021, 6:30 IST
Last Updated 9 ಮೇ 2021, 6:30 IST
ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆ
ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆ   

ಮಂಗಳೂರು: ಕೋವಿಡ್ ಎರಡನೇ ಅಲೆ ಸಮುದಾಯಕ್ಕೆ ವ್ಯಾಪಿಸಿರುವ ಪರಿಣಾಮ ಒಂದು ವಾರದಿಂದ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ.

ಅತಿ ಹೆಚ್ಚು ಹೆರಿಗೆಯಾಗುವ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಾರದಲ್ಲಿ ಐವರು ಗರ್ಭಿಣಿಯರು ಹಾಗೂ 15 ಬಾಣಂತಿಯರು ಸೇರಿದಂತೆ 20 ಜನರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಈ ಪ್ರಮಾಣ ಫೆಬ್ರುವರಿ ತಿಂಗಳಿನಲ್ಲಿ ಶೂನ್ಯ ಇದ್ದರೆ, ಮಾರ್ಚ್‌ನಲ್ಲಿ ಎರಡು ಪ್ರಕರಣಗಳು ಇದ್ದವು. ಏಪ್ರಿಲ್‌ನಲ್ಲಿ ಆಸ್ಪತ್ರೆಯಲ್ಲಿ 502 ಹೆರಿಗೆಯಾಗಿದ್ದು, ನಾಲ್ವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು.

‘272 ಹಾಸಿಗೆಗಳ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಬ್ಲಾಕ್ ಮೀಸಲಿಡಲಾಗಿದೆ. ನಿಯಮದಂತೆ ಹೆರಿಗೆಗೆ 15 ದಿನಗಳ ಪೂರ್ವದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಆಗ ಸೋಂಕು ತಗುಲಿರುವುದು ದೃಢಪಟ್ಟಲ್ಲಿ, ಅವರಿಗೆ ಪ್ರ‌ತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಮಾನ್ಯ ಹೆರಿಗೆಯಾದವರಿಗೆ ಮೂರು ದಿನಗಳಿಗೆ, ಸಿ ಸೆಕ್ಷನ್ ಹೆರಿಗೆಯಾದವರಿಗೆ ಐದು ದಿನಗಳಿಗೆ ಮನೆಗೆ ಕಳುಹಿಸಲಾಗುತ್ತದೆ. ಆದರೆ, ಕೋವಿಡ್ ತಗುಲಿದ ಬಾಣಂತಿಯನ್ನು ಆಸ್ಪತ್ರೆಯಲ್ಲೇ ಆರೈಕೆ ಮಾಡಿ, ತಜ್ಞ ವೈದ್ಯರು ಅವರ ದೈಹಿಕ ದೃಢತೆ ಖಚಿತಪಡಿಸಿದ ಮೇಲೆ ಮನೆಗೆ ಕಳುಹಿಸಲಾಗುತ್ತದೆ’ ಎಂದು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ತಿಳಿಸಿದರು.

ADVERTISEMENT

‘ಕೋವಿಡ್ ಅಥವಾ ಯಾವುದೇ ಸೋಂಕು ಪ್ರತಿರೋಧ ಶಕ್ತಿ ಕಡಿಮೆ ಇರುವವರಲ್ಲಿ ಬೇಗ ದಾಳಿ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಸೋಂಕಿಗೆ ತುತ್ತಾಗುವ ಅಪಾಯವೂ ಇರುತ್ತದೆ. ಅದಕ್ಕೆ ಗರ್ಭಿಣಿಯರು, ಸಾಮಾನ್ಯರಿಗಿಂತ 10 ಪಟ್ಟು ಹೆಚ್ಚು ಕಾಳಜಿ ವಹಿಸಬೇಕು’ ಎಂದು ಅವರು ಸಲಹೆ ಮಾಡಿದರು.

‘ಗರ್ಭಿಣಿ, ಬಾಣಂತಿಯರಲ್ಲಿ ವಾರದ ಈಚೆಗೆ ಪಾಸಿಟಿವಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಗರ್ಭಿಣಿಯರು ಆತಂಕ ಪಡಬೇಕಾಗಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಿ, ತಜ್ಞ ವೈದ್ಯರ ಸಲಹೆ ಪಡೆಯಬೇಕು’ ಎಂದು ಅವರು ಪ್ರತಿಕ್ರಿಯಿಸಿದರು.

‘ಪ್ರತ್ಯೇಕ ವ್ಯವಸ್ಥೆ’

ಕೋವಿಡ್ ಪಾಸಿಟಿವ್ ಬಂದು ಗುಣಮುಖರಾದ ಬಾಣಂತಿಯರನ್ನು ಮನೆಗೆ ಕಳುಹಿಸಿದ ಮೇಲೆ ಅವರ ಬಗ್ಗೆ ನಿಗಾ ವಹಿಸಲಾಗುತ್ತದೆ. ಅವರ ಕುಟುಂಬಕ್ಕೆ ಸೋಂಕು ಹರಡಬಾರದೆಂದು ಇದಕ್ಕೆ ಪ್ರತ್ಯೇಕ ಕಾರ್ಯ ಯೋಜನೆ ರೂಪಿಸಲಾಗಿದೆ. ಅವರು ನೆಲೆಸುವ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಲಾಗುತ್ತದೆ. ಸಂಬಂಧಿಸಿದ ಆರೋಗ್ಯ ಕೇಂದ್ರದವರು ಅವರ ಮನೆಗೆ ಆಗಾಗ ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸುತ್ತಾರೆ ಎಂದು ಡಾ. ದುರ್ಗಾಪ್ರಸಾದ್‌ ಎಂ.ಆರ್. ತಿಳಿಸಿದರು.

ಕೋವಿಡ್ ಪಾಸಿಟಿವ್ ಬಂದವರಲ್ಲಿ ಕೆಲವರಿಗೆ ಗರ್ಭಪಾತ ಆಗಿದೆ. ಆದರೆ, ಅದು ಕೋವಿಡ್‌ನಿಂದಲೇ ಎಂದು ಹೇಳಲು ಸಾಧ್ಯವಿಲ್ಲ. ವಾರದಲ್ಲಿ ಒಬ್ಬರಿಗೆ ಗರ್ಭಪಾತವಾಗಿದೆ. ಗರ್ಭಿಣಿಯರು ಉದ್ವೇಗಗೊಳ್ಳಬಾರದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.