ಸುಳ್ಯ: ‘ಕೋವಿಡ್ ನಿರ್ಮೂಲನೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಎಸ್.ಅಂಗಾರ ತಿಳಿಸಿದರು.
ಶನಿವಾರ ಇಲ್ಲಿ ಮಾತನಾಡಿದ ಸಚಿವರು, ‘ಹಿಂದಿನ ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ. ಕೇರಳ ಗಡಿಭಾಗದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕೇರಳದಿಂದ ಕಾಲುದಾರಿಯಾಗಿ ಈ ಭಾಗಕ್ಕೆ ಜನರು ಓಡಾಡುತ್ತಾರೆಂಬ ಮಾಹಿತಿ ಇದೆ. ಇದನ್ನು ತಡೆಯಲು ಜನರೇ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.
ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದ್ದು, ಯಾವುದೇ ಸೇವೆಗಳು ನಡೆಯುವುದಿಲ್ಲ. ಕೋವಿಡ್‌ನ ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚು ಸಂಖ್ಯೆಯಲ್ಲಿ ಬರಬಾರದು ಎಂದು ವಿನಂತಿಸಿದರು.
ಸಚಿವರಿಂದ ಗಡಿ ತಪಾಸಣೆ: ಆಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಡಿಪ್ರದೇಶವಾದ ಕಲ್ಲಪಳ್ಳಿಯಲ್ಲಿ ತಪಾಸಣಾ ಕೇಂದ್ರಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲಿಸಿದರು. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪಂಚಾಯಿತಿ ನಿರ್ಮಿಸಿದ ಬಸ್ ತಂಗುದಾಣದಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಇದೆ. ಶೌಚಾಲಯದ ವ್ಯವಸ್ಥೆ ಇಲ್ಲದೆ ಪಕ್ಕದಲ್ಲಿರುವ ಮನೆಗಳ ಆಶ್ರಯ ಪಡೆಯಬೇಕಾಗಿದೆ ಎಂಬ ಸಂಗತಿಯನ್ನು ಸಚಿವರ ಗಮನಕ್ಕೆ ತರಲಾಯಿತು.
ಕೂಡಲೇ ಸಚಿವರು ಬಸ್ ತಂಗುದಾಣದ ಪಕ್ಕ ಇರುವ ಜಾಗದಲ್ಲಿ ಹೊಸ ವ್ಯವಸ್ಥಿತ ಶೆಡ್ ನಿರ್ಮಿಸಿ ಶೌಚಾಲಯದ ವ್ಯವಸ್ಥೆ ಮತ್ತು ಸೋಲಾರ್ ದೀಪ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಎಂಜಿನಿಯರ್ ಮಣಿಕಂಠ ಅವರಿಗೆ ಶೆಡ್ ನಿರ್ಮಿಸುವಂತೆ ದೂರವಾಣಿ ಮೂಲಕ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.