ADVERTISEMENT

ಗೋಕಳ್ಳತನ ಪ್ರಕರಣ ಹೆಚ್ಚಳ: ಆರೋಪ

ಗೋಹತ್ಯೆ ನಿಷೇಧ ಕಾಯ್ದೆ ಕಣ್ಣಿಗೆ ಮಣ್ಣೆರಚುವ ತಂತ್ರ: ಖಾದರ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 11:16 IST
Last Updated 7 ಡಿಸೆಂಬರ್ 2021, 11:16 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋವುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗಲು ಬಿಜೆಪಿ ಸರ್ಕಾರ ವೈಫಲ್ಯ ಕಾರಣವಾಗಿದೆ. ಇದನ್ನು ಮರೆಮಾಚಲು ಪೊಲೀಸರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ರಾಜ್ಯದಲ್ಲಿ 14 ಗೋಮಾಂಸ ರಪ್ತು ಘಟಕಗಳು ಕಾರ್ಯಾಚರಿಸುತ್ತಿವೆ. ಸರ್ಕಾರ ಯಾಕೆ ಇದರ ಬಾಗಿಲು ಹಾಕಿಸಿಲ್ಲ. ಚಿಕ್ಕಮಗಳೂರಿನಲ್ಲಿ ಗೋ ಕಳ್ಳತನ ತಡೆಯಲು ವಿಫಲರಾಗಿರುವ ಗೃಹ ಸಚಿವರು, ಪೊಲೀಸರಿಗೆ ಬೈದು, ಅವರ ನೈತಿಕತೆ ಕುಸಿಯುವಂತೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಶಾಸಕರ ಕುಮ್ಮಕ್ಕಿನಿಂದ ಗೋವುಗಳ ಕಳ್ಳತನ ನಡೆಯುತ್ತದೆ ಎಂದು ಆರೋಪ ಮಾಡಲಾಗುತ್ತಿತ್ತು. ಈಗ ಯಾರ ಕುಮ್ಮಕ್ಕಿನಿಂದ ಕಳ್ಳತನ ನಡೆಯುತ್ತಿದೆ’ ಎಂದು ಪ್ರಶ್ನಿಸಿದರು.

ಸಾಮಾಜಿಕ ಶಾಂತಿಗೆ ಭಂಗ ತರುವವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ರಾಜಕೀಯ ಹಸ್ತಕ್ಷೇಪ ಇಲ್ಲದಂತೆ, ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್ ಪಕ್ಷವು ಪಂಚಾಯತ್‌ರಾಜ್ ವ್ಯವಸ್ಥೆಗೆ ಶಕ್ತಿ ತುಂಬಿ, ಅಧಿಕಾರ ವಿಕೇಂದ್ರೀಕರಣದ ಮೂಲಕ ಜನರಿಗೆ ಅಧಿಕಾರ ನೀಡಿತು. ಆದರೆ, ಬಿಜೆಪಿ ಇದನ್ನು ಕಿತ್ತುಕೊಳ್ಳುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರು, ಆ ಪಕ್ಷಕ್ಕೆ ಬುದ್ಧಿ ಕಲಿಸಬೇಕು ಎಂದು ಹೇಳಿದರು. ಮುಖಂಡರಾದ ಸದಾಶಿವ ಉಳ್ಳಾಲ್, ಟಿ.ಕೆ.ಸುಧೀರ್, ಸಂತೋಷ್ ಕುಮಾರ್ ಶೆಟ್ಟಿ, ಉಮ್ಮರ್ ಫಾರೂಕ್, ಲಾರೆನ್ಸ್ ಡಿಸೋಜ, ನಜೀರ್ ಬಜಾಲ್ ಇದ್ದರು.

‘ನಳಿನ್ ಕಾಂಗ್ರೆಸ್‌ಗೆ ಬರಲಿ’

‘ಈ ಹಿಂದೆ ಎನ್‌ಎಸ್‌ಯುಐನಲ್ಲಿದ್ದಾಗ ವಿನಯಕುಮಾರ್ ಸೊರಕೆ ಪರ ಕೆಲಸ ಮಾಡಿದ್ದ ನಳಿನ್‌ಕುಮಾರ್‌ಗೆ ಹಿಂದಿನದು ನೆನಪಾಗುತ್ತಿದೆ. ಸಂಸದ ನಳಿನ್ ಕುಮಾರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ಒಳ್ಳೆಯದು. ಕಾಂಗ್ರೆಸ್ ಕಾರ್ಯಕರ್ತರ ಬದ್ಧತೆ ಹಾಗೂ ಶಕ್ತಿ ನಳಿನ್‍ಗೆ ಗೊತ್ತಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದವರ ಚರಿತ್ರೆಯನ್ನು ಒಮ್ಮೆ ಅವರು ನೋಡಿಕೊಳ್ಳಲಿ. ಬಿಜೆಪಿಯಲ್ಲಿ ಅವರ ಪರಿಸ್ಥಿತಿ ಏನಾಗಿದೆ ಎಂದೂ ಯೋಚಿಸಲಿ. ನಳಿನ್ ಕಾಂಗ್ರೆಸ್‍ಗೆ ಬರಲಿ’ ಎಂದು ಯು.ಟಿ. ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯು.ಟಿ.ಖಾದರ್ ಹಾಗೂ ರಮಾನಾಥ ರೈ ಹೊರತುಪಡಿಸಿ, ಉಳಿದ ಕಾಂಗ್ರೆಸ್ಸಿಗರು ಬಿಜೆಪಿಗೆ ಬರಲಿ ಎಂಬ ನಳಿನ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.