ADVERTISEMENT

ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 17:19 IST
Last Updated 27 ಜೂನ್ 2020, 17:19 IST
ಮಂಗಳೂರಿನ ಕ್ಲಾಕ್‌ಟವರ್‌ ಬಳಿ ಶನಿವಾರ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ಮಂಗಳೂರಿನ ಕ್ಲಾಕ್‌ಟವರ್‌ ಬಳಿ ಶನಿವಾರ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು   

ಮಂಗಳೂರು: ಪೆಟ್ರೋಲ್– ಡೀಸೆಲ್ ದರವನ್ನು ವಿಪರೀತವಾಗಿ ಏರಿಸಿ, ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಉದ್ಘಾಟಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ತತ್ವಗಳಿಗೆ ಅಪಾಯ ತಂದೊಡ್ಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಕುಸಿದಿದ್ದರೂ ದೇಶದಲ್ಲಿ ತೈಲ ಬೆಲೆಗಳು ಏರಿಕೆ ಆಗುತ್ತಿವೆ. ಇದರಿಂದ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿದ್ದು, ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರಲಿದೆ’ ಎಂದರು.

ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, 'ಪೆಟ್ರೋಲ್ ದರ ₹ 30ಕ್ಕೆ ಇಳಿಸುವುದಾಗಿ ಬಡಾಯಿ ಕೊಚ್ಚಿಕೊಂಡವರು, ಇಂದು ಪೆಟ್ರೋಲ್ ದರ ಆಕಾಶದೆತ್ತರಕ್ಕೆ ಏರುತ್ತಿದ್ದರೂ, ಬಾಯಿ ಬಿಡುತ್ತಿಲ್ಲ. ಕೋವಿಡ್‌–19ನಿಂದ ಇಡೀ ದೇಶವೇ ತತ್ತರಿಸುತ್ತಿದ್ದು, ಜನಸಾಮಾನ್ಯರ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಹಿತಕಾಯುತ್ತಿದೆ' ಎಂದು ದೂರಿದರು.

ADVERTISEMENT

ಯುವ ನಾಯಕ ಸಂತೋಷ್ ಬಜಾಲ್ ಮಾತನಾಡಿದರು. ವಾಸುದೇವ ಉಚ್ಚಿಲ್, ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಸಿಪಿಎಂ ನಗರ ಮುಖಂಡರಾದ ಸುರೇಶ್ ಬಜಾಲ್, ದಿನೇಶ್ ಶೆಟ್ಟಿ, ಸಿಐಟಿಯು ನಾಯಕರಾದ ಸ್ಟಾನ್ಲಿ ನೊರೊನ್ಹ, ಅನ್ಸಾರ್, ಸಂತೋಷ್ ಆರ್.ಎಸ್., ಹರೀಶ್ ಪೂಜಾರಿ, ದಲಿತ ಹಕ್ಕುಗಳ ಸಮಿತಿಯ ಪ್ರಶಾಂತ್ ಉರ್ವ ಸ್ಟೋರ್, ರಘುವೀರ್, ಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.