ADVERTISEMENT

ತವರಿಗೆ ಮರಳಿದ ಕ್ಯಾ.ಚೌಟಗೆ ಅಭಿನಂದನೆ

‘ಆಪರೇಷನ್ ಸಿಂಧೂರ’ದ ಉದ್ದೇಶ ಮನವರಿಕೆ:ನಿಯೋಗದ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದ ಸಂಸದ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 4:36 IST
Last Updated 5 ಜೂನ್ 2025, 4:36 IST
 ಸಂಸದ ಬ್ರಿಜೇಶ್‌ ಚೌಟ ವರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು :ಪ್ರಜಾವಾಣಿ ಚಿತ್ರ
 ಸಂಸದ ಬ್ರಿಜೇಶ್‌ ಚೌಟ ವರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು :ಪ್ರಜಾವಾಣಿ ಚಿತ್ರ   

ಮಂಗಳೂರು: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಉದ್ದೇಶ ಮತ್ತು ವಸ್ತುಸ್ಥಿತಿ ವಿವರಿಸಲು ಸರ್ವಪಕ್ಷಗಳ ನಿಯೋಗದ ಜೊತೆ ವಿದೇಶಗಳಿಗೆ ತೆರಳಿ, ನಗರಕ್ಕೆ ಮರಳಿರುವ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಬಿಜೆಪಿಯ ಜಿಲ್ಲಾ ಘಟಕದ ವತಿಯಿಂದ ಬುಧವಾರ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕ್ಯಾ.ಚೌಟ, ‘ಪೆಹಲ್ಗಾಮ್‌ನಲ್ಲಿ ಧರ್ಮವನ್ನು ಪ್ರಶ್ನಿಸಿ ಹೆಂಡತಿ, ಮಕ್ಕಳ ಮುಂದೆಯೇ ದೇಶದ ನಾಗರಿಕರನ್ನು ಕೊಂದು ದೇಶದಲ್ಲಿ ಹಿಂದು- ಮುಸ್ಲಿಮರ ನಡುವೆ ಜಗಳ ಸೃಷ್ಟಿಸಲು ಪ್ರಯತ್ನಿಸಿದ ಪಾಕಿಸ್ತಾನ ಪ್ರಾಯೋಜಿತ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಸೇನೆಯ ವೃತ್ತಿಪರತೆ  ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ನಡೆದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಭವಿಷ್ಯದಲ್ಲೂ ಇದೇ ರೀತಿಯ ಉತ್ತರ ಸಿಗಲಿದೆ. ಈ ವಿಚಾರವನ್ನು ಜಗತ್ತಿನ ವಿವಿಧ ದೇಶಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದೇವೆ‘ ಎಂದರು.

 ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಪಕ್ಷದ ಮುಖಂಡ ಕ್ಯಾ. ಗಣೇಶ್ ಕಾರ್ಣಿಕ್,  ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರದಾದ ಪ್ರತಾಪಸಿಂಹ ನಾಯಕ್, ಕಿಶೋರ್‌ಕುಮಾರ್ ಪುತ್ತೂರು,  ಮುಖಂಡರಾದ ನಾಗರಾಜ ಶೆಟ್ಟಿ, ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್  ಭಾಗವಹಿಸಿದ್ದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸುನೀಲ್ ಆಳ್ವ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಪೈ ವಂದಿಸಿದರು.

10 ಸಿದ್ದರಾಮಯ್ಯ ಬಂದರೂ ಬೆಂಬಲ ಸಿಗದು

‘ಕಾನೂನು ಸುವ್ಯವಸ್ಥೆ ಕಾಪಾಡಲು ಆಗದ ಕಾಂಗ್ರೆಸ್ ಸರ್ಕಾರ ಹಿಂದುತ್ವವಾದಿ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುತ್ತಿದೆ. ಇಂತಹ ಬೆದರಿಕೆ ಮೂಲಕ ಪಕ್ಷವನ್ನು ಕಟ್ಟಿ ಜಿಲ್ಲೆಯ ಜನರ ಬೆಂಬಲ ಪಡೆಯುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ.  ಸಿದ್ದರಾಮಯ್ಯನರಂತಹ 10 ಮಂದಿ ಬಂದರೂ ಇಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸಿಗದು’ ಎಂದು ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ‘ದಕ್ಷಿಣ ಕನ್ನಡ ಹಿಂದುತ್ವದ ನೆಲ. ಇಲ್ಲಿನ ಜನ ರಾಷ್ಟ್ರೀಯತೆ ಪರವಾಗಿದ್ದಾರೆ. ಹಿಂದುತ್ವವಾದಿ ಕಾರ್ಯಕರ್ತರ ಜೊತೆ ನಾವಿದ್ದೇವೆ. ಪೊಲೀಸರು ನೀಡುತ್ತಿರುವ ಹಿಂಸೆ ಕಿರುಕುಳ ತಡೆಯಲು ಕಾನೂನು ಹೋರಾಟ ನಡೆಸುತ್ತೇವೆ. ಪೊಲೀಸರನ್ನು ಮುಂದಿಟ್ಟು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರನ್ನು ಬೆದರಿಸಿದರೆ ಇಲ್ಲಿನ ಜನ ಸರ್ಕಾರವ ವಿರುದ್ಧ ರೊಚ್ಚಿಗೇಳಲಿದ್ದಾರೆ. ಆ ದಿನ ದೂರವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.