ಮಂಗಳೂರು: ವ್ಯಾಯಾಮ ಮಾಡುವಾಗ ಆಯಾಸಗೊಂಡು ಕುಸಿದು ಬಿದ್ದು ಪೇಂಟಿಂಗ್ ಕಾರ್ಮಿಕರೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ನಗರದ ರಾಯಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜಿತೇಂದ್ರ ಯಾದವ್ ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.
‘ಜಿತೇಂದ್ರ ಅವರು ತನ್ನ ಸೋದರ ಶನಿ ಯಾದವ್ ಹಾಗೂ ದೊಡ್ಡಪ್ಪನ ಮಗ ಆಶಿಶ್ ಕುಮಾರ್ ಯಾದವ್ ಅವರ ಜೊತೆ ರಾಯಿಕಟ್ಟೆಯಲ್ಲಿ ವಾಸವಿದ್ದರು. ಶುಕ್ರವಾರ ಸಂಜೆ ಪೇಂಟಿಂಗ್ ಕೆಲಸ ಮುಗಿಸಿ ಬಂದ ಜಿತೇಂದ್ರ ಯಾದವ್ ಊಟ ಮುಗಿಸಿ ಮಲಗಿದ್ದರು. ಶನಿವಾರ ಮುಂಜಾನೆ 5.30ರ ಸುಮಾರಿಗೆ ಎದ್ದು ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದರು. ಸ್ಮೃತಿ ತಪ್ಪಿದ್ದ ಅವರನ್ನು ತಕ್ಷಣವೇ ರಿಕ್ಷಾದಲ್ಲಿ ಸಮೀಪದ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಆಶಿಶ್ ಯಾದವ್ ಅವರು ದೂರು ನೀಡಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.