
ಮಂಗಳೂರು: ಹಗ್ಗದಲ್ಲಿ ನೇತಾಡುತ್ತ, ಕಂಬದಲ್ಲಿ ಓಲಾಡುತ್ತ ಮಲ್ಲಕಂಬದ ಕಸರತ್ತು ತೋರಿದ ವಿದ್ಯಾರ್ಥಿಗಳು, ಸ್ಟಿಕ್ ಡ್ಯಾನ್ಸ್ ಮೂಲಕ ಸಮರಕಲೆಯ ರೋಮಾಂಚನ ಉಣಬಡಿಸಿದ ಹೊರರಾಜ್ಯದ ಕಲಾವಿದರು; ತೆಂಕು–ಬಡಗುತಿಟ್ಟಿನ ಯಕ್ಷಗಾನದ ಸವಿಯುಣಿಸಿದ ಕಲಾವಿದರು, ಶಾಸ್ತ್ರೀಯ ನೃತ್ಯ ಮತ್ತು ಡೊಳ್ಳು ಕುಣಿತದ ಗಮ್ಮತ್ತು ನೀಡಿದ ಪ್ರತಿಭಾವಂತರು..
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ವಿರಾಸತ್ ನುಡಿಸಿರಿಯ ಪುತ್ತೂರು ಘಟಕ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಸಹೃದಯರನ್ನು ತಾಸುಗಟ್ಟಲೆ ರಂಜಿಸಿತು.
ಶಿವನನ್ನು ಸ್ತುತಿಸುವ ಹಾಡಿಗೆ ಕಲಾತ್ಮಕ ಯೋಗ ಪ್ರದರ್ಶನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು. ಸಾಲಾಗಿ ನಿಂತ ಯೋಗಪಟುಗಳು ಮೊದಲು ವಿವಿಧ ಆಸನಗಳ ಪ್ರದರ್ಶಿಸಿದರು. ನಂತರ ವಿವಿಧ ರಚನೆಗಳನ್ನು ಮಾಡಿತೋರಿಸಿ ಪ್ರೇಕ್ಷಕರನ್ನು ಮುದಗೊಳಿಸಿದರು.
ನಂತರ ಭರತನಾಟ್ಯದ ಸೊಬಗು ಮೇಳೈಸಿತು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಬಣ್ಣಿಸುತ್ತ ಅಷ್ಟಲಕ್ಷ್ಮಿಯರನ್ನು ಪರಿಚಯಿಸಿದ ಕಲಾವಿದರು ವಿವಿಧ ಭಾವಗಳ ಮೂಲಕ ಕಲಾರಸಿಕರ ಮನಕ್ಕೆ ಲಗ್ಗೆ ಇಟ್ಟರು. ಶಿವ–ಪಾರ್ವತಿಯರ ಆದರ್ಶ ದಾಂಪತ್ಯದ ಚಿತ್ರಣ ನೀಡುವ ‘ಶಂಕರಾರ್ಧ ಶರೀರಿಣಿ’ ತೆಂಕುತಿಟ್ಟಿನ ಯಕ್ಷಗಾನದ ಮೂಲಕ ಪ್ರಸ್ತುತಗೊಂಡಿತು.
ಗುಜರಾತ್‌ನ ದಾಂಡಿಯ ನೃತ್ಯ ಸಭಾಂಗಣದಲ್ಲಿ ತುಂಬಿದ್ದವರನ್ನು ಕುಳಿತಲ್ಲೇ ಕುಣಿಸಿತು. ಇದರ ಬೆನ್ನಲ್ಲೇ ಮಣಿಪುರದ ಸ್ಟಿಕ್ ಡ್ಯಾನ್ಸ್ ಸಮರಕಲೆಯ ರೋಮಾಂಚನವನ್ನು ನೀಡಿತು. ಇದರ ಜೊತೆಯಲ್ಲೇ ಪ್ರಶಸ್ತಿ ಗೆದ್ದ ಆಳ್ವಾಸ್ ಕಾಲೇಜಿನ ದೇಹದಾರ್ಢ್ಯಪಟುಗಳ ಭಂಗಿಗಳು ಬೆರಗುಗೊಳಿಸಿದವು. ನಂತರ ಮಲ್ಲಕಂಬಪಟುಗಳು ಕಂಬದಲ್ಲೂ ಹಗ್ಗದಲ್ಲೂ ಮೈನವಿರೇಳಿಸುವ ಪ್ರದರ್ಶನ ನೀಡಿದರು.
ನೃತ್ಯರೂಪಕ, ಡೊಳ್ಳು ಕುಣಿತ, ಕಥಕ್ ನೃತ್ಯ, ಸಿಂಹಬೇಟೆಯ ಪುರುಲಿಯಾದ ನಂತರ ತೆಂಕುತಿಟ್ಟು ಯಕ್ಷಗಾನದ ಧೀಂಗಣ. ಕೊನೆಗೆ ಬೊಂಬೆ ವಿನೋದಾವಳಿಗೆ ಲೇಝರ್ ಷೋ ಮತ್ತು ಪಟಾಕಿಯ ಮೆರುಗು ಇತ್ತು. ಬೊಂಬೆಗಳು ವೇದಿಕೆಯಿಂದ ಕೆಳಗಿಳಿದು ನರ್ತಿಸಿದಾಗ ಜನರೂ ಅವುಗಳ ಜೊತೆ ಕುಣಿದರು.
ಬದುಕಿನ ಕಲೆ ಕಲಿಸುವ ಆಳ್ವಾಸ್
ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಬಾರ್ಕೂರು ಮಹಾಸಂಸ್ಥಾನದ ಸಂತೋಷ್ ಗುರೂಜಿ, ಪದವೀಧರರಾಗುವುದು ಮುಖ್ಯವಲ್ಲ, ಶಿಕ್ಷಣ ಪಡೆದವರು ವಿದ್ಯಾವಂತರಾಗಬೇಕು. ಇಲ್ಲವಾದರೆ ತಂದೆತಾಯಿಯರನ್ನೇ ವೃದ್ಧಾಶ್ರಮಕ್ಕೆ ಸೇರಿಸುವ ಕುಸಂಸ್ಕೃತಿ ಬೆಳೆಯುವ ಅಪಾಯವಿದೆ ಎಂದರು. ಆಳ್ವಾಸ್ ಸಂಸ್ಥೆಯಲ್ಲಿ ಶಿಕ್ಷಣದ ಜೊತೆಯಲ್ಲಿ ಬದುಕಿನ ಕಲೆಯನ್ನೂ ಕಲಿಸುತ್ತಾರೆ. ಇಂಥ ಸಂಸ್ಥೆಯ ರೂವಾರಿ ಮೋಹನ ಆಳ್ವ ಅವರಿಗೆ ಪದ್ಮಶ್ರೀ ಸಿಗಲೇಬೇಕು ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅನೇಕ ಜಾತಿ, ಧರ್ಮಗಳು ಇರುವ ದೇಶ ಭಾರತ. ಆಳ್ವಾಸ್ ಸಂಸ್ಥೆಯೂ ಮಿನಿ ಭಾರತದಂತೆ ಇದೆ ಎಂದರು.
ಶಾಸಕರಾದ ಅಶೋಕ್ ಕುಮಾರ್ ರೈ, ಕಿಶೋರ್ ಕುಮಾರ್, ಮುಖಂಡರಾದ ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು, ಶಂಕುತಳಾ ಶೆಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.