ADVERTISEMENT

ವಸ್ತು ಸಂಗ್ರಹಾಲಯವಾಗಿ ಕಸ್ಟಮ್ಸ್‌ ಹಳೆ ಕಚೇರಿ

ಬೆಂಗಳೂರು ವಲಯದ ಕಸ್ಟಮ್ಸ್‌ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 11:31 IST
Last Updated 9 ಜುಲೈ 2019, 11:31 IST
ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿರುವ ಹಳೆಯ ಕಸ್ಟಮ್ಸ್‌ ಕಚೇರಿಯ ನವೀಕೃತ ಕಟ್ಟಡವನ್ನು ಕಸ್ಟಮ್ಸ್ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ಮಂಗಳವಾರ ಉದ್ಘಾಟಿಸಿದರು.
ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿರುವ ಹಳೆಯ ಕಸ್ಟಮ್ಸ್‌ ಕಚೇರಿಯ ನವೀಕೃತ ಕಟ್ಟಡವನ್ನು ಕಸ್ಟಮ್ಸ್ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ಮಂಗಳವಾರ ಉದ್ಘಾಟಿಸಿದರು.   

ಮಂಗಳೂರು: ನಗರದ ಹಳೆ ಬಂದರು ಪ್ರದೇಶದಲ್ಲಿ ನವೀಕರಣಗೊಂಡಿರುವ 133 ವರ್ಷಗಳಷ್ಟು ಹಳೆಯ ಕಸ್ಟಮ್ಸ್‌ ಕಚೇರಿ ಕಟ್ಟಡವನ್ನು ಕರಾವಳಿ ಮತ್ತು ಕರ್ನಾಟಕದ ವಸ್ತು ಸಂಗ್ರಹಾಲಯವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕಸ್ಟಮ್ಸ್‌ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ತಿಳಿಸಿದರು.

ಮಂಗಳವಾರ ನಡೆದ ಹಳೆಯ ಕಸ್ಟಮ್ಸ್‌ ಕಚೇರಿಯ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕರಾವಳಿ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪಾರಂಪರಿಕ ಹಾಗೂ ಐತಿಹಾಸಿಕ ಮಹತ್ವವುಳ್ಳ ವಸ್ತುಗಳು, ಛಾಯಾಚಿತ್ರಗಳು, ಪ್ರಾಚೀನ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. ಕಸ್ಟಮ್ಸ್‌ ಬಳಿ ಇರುವ ಮಹತ್ವದ ಸ್ವತ್ತುಗಳನ್ನೂ ಪ್ರದರ್ಶಿಸಲಾಗುವುದು’ ಎಂದರು.

ಮಂಗಳೂರು ಮತ್ತು ಕರಾವಳಿಯ ಜನರು ತಮ್ಮ ಮನೆಗಳಲ್ಲಿ ಲಭ್ಯವಿರುವ ಐತಿಹಾಸಿಕ ಮಹತ್ವದ ವಸ್ತುಗಳನ್ನು ತಂದು ಒಪ್ಪಿಸಿದರೆ ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು. ಅವುಗಳನ್ನು ನೀಡಿದವರ ಹೆಸರುಗಳನ್ನೂ ಉಲ್ಲೇಖಿಸಲಾಗುವುದು. ಕಟ್ಟಡದ ಎದುರು ‘ಕ್ಯೂಆರ್‌ ಕೋಡ್‌’ ಒಂದನ್ನು ಪ್ರದರ್ಶಿಸಲಾಗುವುದು. ಅದರ ಮೂಲಕ ಈ ಕಟ್ಟಡದ ಇತಿಹಾಸವನ್ನು ಅರಿಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಈ ಕಟ್ಟಡದ ಇತಿಹಾಸವನ್ನು ಜನರ ಮುಂದಿಡುವುದು ಕಸ್ಟಮ್ಸ್‌ ಗುರಿಯಾಗಿದೆ. ಇದನ್ನು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕೆಂಬುದು ತಮ್ಮ ಬಯಕೆ. 133 ವರ್ಷಗಳ ಹಳೆಯ ಕಟ್ಟಡದ ಮೂಲ ಸ್ವರೂಪಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ ನವೀಕರಣ ಮಾಡಲಾಗಿದೆ ಎಂದರು.

ಮಂಗಳೂರು ಕಸ್ಟಮ್ಸ್‌ ಆಯುಕ್ತರಾಗಿದ್ದ ವೇಳೆ ಕಟ್ಟಡದ ನವೀಕರಣಕ್ಕೆ ನಾಂದಿ ಹಾಡಿದ್ದ ಬೆಂಗಳೂರು ಜಿಎಸ್‌ಟಿ ಲೆಕ್ಕಪರಿಶೋಧನಾ ವಿಭಾಗದ ಆಯುಕ್ತ ಡಾ.ಎಂ.ಸುಬ್ರಮಣ್ಯಂ ಮಾತನಾಡಿ, ‘ಮಂಗಳೂರಿನ ಜನರು ತಮ್ಮ ಪರಂಪರೆ ಮತ್ತು ಕೌಟುಂಬಿಕ ಆಸ್ತಿಗಳ ಜೊತೆಗೆ ಹೊಂದಿರುವ ನಂಟು ಈ ಕಟ್ಟಡದ ನವೀಕರಣಕ್ಕೆ ನನಗೆ ಪ್ರೇರಣೆ ನೀಡಿತು’ ಎಂದು ಹೇಳಿದರು.

ಮಂಗಳೂರು ಹೇಗೆ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಿತು ಮತ್ತು ಈ ಕಟ್ಟಡದ ಜೊತೆ ನಂಟು ಹೊಂದಿರುವ ಐತಿಹಾಸಿಕ ಸಂಗತಿಗಳಿಗೆ ಸಂಬಂಧಿಸಿದ ಮಾಹಿತಿ, ವಸ್ತುಗಳನ್ನು ಇಲ್ಲಿ ಪ್ರದರ್ಶಿಸಬೇಕಿದೆ. ಅದರ ನೆನಪಿನಲ್ಲಿ ವಿಶೇಷ ಲಕೋಟೆಯೊಂದನ್ನು ಬಿಡುಗಡೆ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಕೇಂದ್ರೀಯ ಲೋಕೋಪಯೋಗಿ ಇಲಾಖೆಯ ದಕ್ಷಿಣ ವಲಯ ಮುಖ್ಯ ಎಂಜಿನಿಯರ್‌ ಶಂಭುನಾಥ್‌ ರೈ, ಮಂಗಳೂರು ಕಸ್ಟಮ್ಸ್‌ ಕಮಿಷನರೇಟ್‌ನ ಕಸ್ಟಮ್ಸ್‌ ಆಯುಕ್ತ ಪರಾಗ್‌ ಸಿ.ಬೋರ್ಕರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.