ಮಂಗಳೂರು: ‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಸೈಬರ್ ವಂಚನೆ ಪ್ರಕರಣಗಳಲ್ಲಿ ಒಂದೇ ವರ್ಷದಲ್ಲಿ ಸಂತ್ರಸ್ತರು ₹ 11 ಕೋಟಿಗಳಷ್ಟು ನಷ್ಟ ಅನುಭವಿಸಿದ್ದಾರೆ. ಸೈಬರ್ ವಂಚನೆ ಬಗ್ಗೆ ಜನ ಜಾಗೃತರಾಗಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಇಲ್ಲಿ ಗುರುವಾರ ಆಯೋಜಿಸಿದ್ದ ಸೈಬರ್ ಅಪರಾಧ ತಡೆಯುವ ಕುರಿತ ಜಾಗೃತಿ ಜಾಥಾದ ಸಮಾರೋಪದಲ್ಲಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ನಡೆದ ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ‘ನಕಲಿ ಚಹರೆ, ನಕಲಿ ಧ್ವನಿ ಬಳಸಿ ಆನ್‌ಲೈನ್ ವಂಚನೆ ನಡೆಸಲಾಗುತ್ತಿದೆ. ಸೈಬರ್ ಅಪರಾಧ ಪ್ರಕರಣಗಳನ್ನು ಭೇದಿಸುವುದು ದೊಡ್ಡ ಸವಾಲು. ಶೇ20ರಷ್ಟನ್ನು ಮಾತ್ರ ಭೇದಿಸಲು ಸಾಧ್ಯವಾಗುತ್ತಿದೆ. ಜನ ಇಂತಹ ಮೋಸದ ಜಾಲಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.
‘ಸೈಬರ್ ಅಪರಾಧ ಕೃತ್ಯಗಳ ಬಗ್ಗೆ ತ್ವರಿತವಾಗಿ ದೂರು ದಾಖಲಾದರೆ ಆರೋಪಿಗಳ ಪತ್ತೆಯಾಗುವ ಸಾಧ್ಯತೆ ಜಾಸ್ತಿ. ಹಾಗಾಗಿ ಈ ಬಗ್ಗೆ ಎಲ್ಲ ಠಾಣೆಯಲ್ಲೂ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.
ಕರಾವಳಿ ರಕ್ಷಣಾ ಪಡೆಯ ಡಿಐಜಿ ಪಿ.ಕೆ. ಮಿಶ್ರಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಓಷನ್ ಪರ್ಲ್ ಉಪಾಧ್ಯಕ್ಷ ಬಿ.ಎನ್. ಗಿರೀಶ್, ರೋಹನ್ ಕಾರ್ಪೊರೇಷನ್‍ನ ಮಾಲೀಕ ರೋಹನ್ ಮೊಂತೇರೊ, ವಿಧಿವಿಜ್ಞಾನ ತಜ್ಞ ಡಾ.ಮಹಾಬಲ ಶೆಟ್ಟಿ, ಸೈಬರ್ ತಜ್ಞ ಅನಂತ ಪ್ರಭು, ಎನ್‍ಐಟಿಕೆ ಕಂಪ್ಯೂಟರ್ ವಿಭಾಗದ ಸಹ ಪ್ರಾಧ್ಯಾಪಕ ತೈಲಿಯಾನಿ, ಕಣಚೂರು ಶಿಕ್ಷಣ ಸಂಸ್ಥೆಯ ಅಬ್ದುಲ್ ರೆಹಮಾನ್, ಯುನಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಹಬೀಬ್ ರೆಹಮಾನ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್ ಭಾಗವಹಿದ್ದರು.
ಕೊಡಿಯಾಲ್‌ಬೈಲ್‌ನ ಟಿ.ಎಂ.ಎ ಪೈ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದ ಬಳಿಯಿಂದ ರಾಷ್ಟ್ರಕವಿ ಗೋವಿಂದ ಪೈ ವೃತ್ತದವರೆಗೆ ನಡೆದ ಸೈಬರ್ ಅಪರಾಧ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದರು.
`ಸೈಬರ್ ಜಾಗೃತಿ' ಸ್ಪರ್ಧೆ
ನಗರದ ಪೊಲೀಸ್ ಕಮಿಷನರೇಟ್ ವತಿಯಿಂದ ಸೈಬರ್ ಅಪರಾಧ ಜಾಗೃತಿ ವಿಡಿಯೊ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ರೋಲ್‍ವಿನ್ ಸಂಪತ್ ಕುಮಾರ್ ರೈ ಆಯೇಷಾ ಸಾಬಾ ರಾಯ್‍ಸ್ಟನ್ ಜೋವಿನ್ ಡಿಕುನ್ಹಾ ಶೋಧನಾ ಡಿ.ಕೆ. ಸಾಹಿನಾ ಮತ್ತು ತಂಡ ಶಶಿಕಾಂತ್ ಆರ್. ಕೋಟ್ ನಾಗೇಶ್ ಕಾಮತ್ ಸಾಧನ್ ರೈ ಅವರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.