ADVERTISEMENT

ದೇವರಾಜ ಅರಸು ಮಾದರಿ ರಾಜಕಾರಣಿ: ಶಾಸಕ ಅಶೋಕ್ ರೈ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 12:41 IST
Last Updated 20 ಆಗಸ್ಟ್ 2023, 12:41 IST
ಪುತ್ತೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಡಿ.ದೇವರಾಜ ಅರಸು ಅವರ ಜನ್ಮದಿನವನ್ನು ಶಾಸಕ ಅಶೋಕ್‌ಕುಮಾರ್ ರೈ ಅವರು ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಗಿರೀಶ್‌ನಂದನ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಇದ್ದರು
ಪುತ್ತೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಡಿ.ದೇವರಾಜ ಅರಸು ಅವರ ಜನ್ಮದಿನವನ್ನು ಶಾಸಕ ಅಶೋಕ್‌ಕುಮಾರ್ ರೈ ಅವರು ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ಗಿರೀಶ್‌ನಂದನ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಇದ್ದರು   

ಪುತ್ತೂರು: ಸಮಾಜದ ಶೋಷಿತ ವರ್ಗದ ಧ್ವನಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ್ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರ. ಅವರು ಮಾಡಿರುವ ಅತ್ಯುತ್ತಮ ಕೆಲಸಗಳಿಂದ ಇಂದು ದೇಶವೇ ಅವರನ್ನು ನೆನಪಿಸಿಕೊಳ್ಳುತ್ತಿದ್ದು, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯಪಟ್ಟರು.

ಪುತ್ತೂರು ತಾಲ್ಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂ ಸುಧಾರಣೆಯಂಥ ಕ್ರಾಂತಿಕಾರಿ ವ್ಯವಸ್ಥೆಗೆ ಮುನ್ನುಡಿ ಬರೆದ ಅರಸು ಅವರು ಉಳುವವನೇ ಹೊಲದೊಡೆಯ ಎನ್ನುವ ಮೂಲಕ ನಾಡಿನ ರೈತಾಪಿ ವರ್ಗವನ್ನು ಭೂಮಾಲೀಕರ ಕಪಿಮುಷ್ಟಿಯಿಂದ ವಿಮುಕ್ತಿಗೊಳಿಸುವ ಹೆಜ್ಜೆ ಇಟ್ಟಿರುವುದು ಅವರ ಸಾಧನೆಯಾಗಿದೆ. ತಮ್ಮ ಕಾರ್ಯಗಳ ಮೂಲಕ ಶ್ರೇಷ್ಠ ಮುಖ್ಯಮಂತ್ರಿಯಾಗಿ ಅವರು ಜನತೆಯ ನೆನಪಿನಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ಮಾತನಾಡಿದರು.

ಉಪನ್ಯಾಸ ನೀಡಿದ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರು, ಭೂಮಾಲೀಕರ ಕುಟುಂಬದಿಂದ ಬಂದ ದೇವರಾಜ ಅರಸು ಅವರು ಹಿಂದುಳಿದ ಹಾಗೂ ಶೋಷಿತ ವರ್ಗದ ಜನತೆಯ ಸ್ಥಾನದಲ್ಲಿ ನಿಂತು ಅವರ ಕಲ್ಪನೆಗಳಿಗೆ ಜೀವತುಂಬಿದ ಶ್ರೇಷ್ಠ ವ್ಯಕ್ತಿ. ಅವರ ಮಾನವೀಯ ಮೌಲ್ಯಗಳ ಪ್ರತಿಪಾದನೆ, ಭಾರತೀಯ ಮೌಲ್ಯಗಳ ಮೌಲ್ಯಾಧಾರಿತ ಚಿಂತನೆ, ಅಂತಃಕರಣ ತುಂಬಿದ ದೂರದೃಷ್ಟಿ ಚಿಂತನೆಯ ಪರಿಣಾಮವಾಗಿ ಮೂಡಿಬಂದ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳು ಅವರ ಸಾಧನೆಯ ಫಲವನ್ನು ಇಂದಿನ ಮಕ್ಕಳಿಗೆ ನೀಡುತ್ತಿದೆ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಸತಿನಿಲಯದ ವಿದ್ಯಾರ್ಥಿಗಳಾದ ಮೇಘನಾ ಜೋಡುಕಟ್ಟೆ, ನಂದೀಶ್ ಎ., ನಿಹಾಲ್ ಪುತ್ತೂರು, ಸಚಿತ್ರಾ ಬನ್ನೂರು ಅವರನ್ನು ಗೌರವಿಸಲಾಯಿತು. ಸದ್ಭಾವನಾ ಪ್ರತಿಜ್ಞೆ ಸ್ವೀಕರಿಸಲಾಯಿತು.

ತಹಶೀಲ್ದಾರ್ ಜೆ.ಶಿವಶಂಕರ್ ಇದ್ದರು. ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕು ಕಲ್ಯಾಣಾಧಿಕಾರಿ ರಾಜ್‌ಗೋಪಾಲ್ ಎನ್.ಎನ್. ಸ್ವಾಗತಿಸಿದರು. ಇಲಾಖೆಯ ಪವಿತ್ರಾ ವಂದಿಸಿದರು. ಶಿಕ್ಷಕ ಬಾಲಕೃಷ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.