ADVERTISEMENT

ಕಾರ್ಮಿಕರ ಮುಷ್ಕರ ಫೆ.1ರಿಂದ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 6:20 IST
Last Updated 31 ಜನವರಿ 2023, 6:20 IST

ಮಂಗಳೂರು: ನಗರದ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ಒಳಪಡಿಸಿ ಹಂತ ಹಂತವಾಗಿ ಕಾಯಂಗೊಳಿಸುವಂತೆ ಒತ್ತಾಯಿಸಿ, ರಾಜ್ಯದಾದ್ಯಂತ ಫೆ.1ರಿಂದ ರಾಜ್ಯ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದವರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದ್ದಾರೆ ಎಂದು ಸಂಘದ ಕರಾವಳಿ ವಿಭಾಗದ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕಾಡು ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಕಾಯಂ ಮಾಡಲು ಮುಂದಾಗಿರುವ ಸರ್ಕಾರ, ಪೌರ ಕಾರ್ಮಿಕರೊಂದಿಗೆ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್‌, ಕ್ಲೀನರ್ಸ್‌, ಹೆಲ್ಪರ್ಸ್‌, ಡಾಟಾ ಆಪರೇಟರ್‌ಗಳು, ಸ್ಯಾನಿಟರಿ ಸೂಪರ್‌ವೈಸರ್‌ಗಳು ಸೇರಿದಂತೆ 15ಸಾವಿರಕ್ಕೂ ಅಧಿಕ ನೌಕರರನ್ನು ಗುತ್ತಿಗೆಯಲ್ಲಿ ಉಳಿಸಿ ತಾರತಮ್ಯ ಎಸಗಿದೆ. ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ನೌಕರರ ಪಾತ್ರ ಮಹತ್ವದ್ದಾಗಿದೆ. 2017ರಲ್ಲಿ ಪೌರ ಕಾರ್ಮಿಕರನ್ನು ನೇಮಕಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲೇ ಉಳಿಸಲಾಯಿತು. ಈಗಲೂ ಅದೇ ರೀತಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೆ.1ರಂದು ನಡೆಯುವ ಮುಷ್ಕರದಲ್ಲಿ ರಾಜ್ಯದ 330 ನಗರ ಸ್ಥಳೀಯ– ಸಂಸ್ಥೆಗಳ ಹೊರಗುತ್ತಿಗೆ ನೌಕರರು ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲೂ ಮುಷ್ಕರ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ನೌಕರರು ಭಾಗವಹಿಸಲಿದ್ದಾರೆ ಎಂದುತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.