ADVERTISEMENT

ಅಪಘಾತ: ಯುವಕನ ಮಿದುಳು ನಿಷ್ಕ್ರಿಯ, ಅಂಗಾಂಗ ದಾನಕ್ಕೆ ಕುಟುಂಬದವರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 12:49 IST
Last Updated 8 ಜನವರಿ 2023, 12:49 IST
ಭೂಷಣ್‌ ರೈ
ಭೂಷಣ್‌ ರೈ   

ಉಳ್ಳಾಲ: ಇಲ್ಲಿನ ಕುತ್ತಾರು ಬಳಿ ಶನಿವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಅವರ ಅಂಗಾಂಗ ದಾನ ನಡೆಸಲು ಕುಟುಂಬದವರು ಮುಂದಾಗಿದ್ದಾರೆ.

ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬೈಕ್‌ನಲ್ಲಿ ಭೂಷಣ್‌ ಸಾಗುತ್ತಿದ್ದಾಗ ಕುತ್ತಾರು ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಸಮೀಪ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ.

ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ಕೆಲಕಾಲ ಬಿದ್ದಿದ್ದ ಅವರನ್ನು ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕೇರಳದ ಐವರು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿದ್ದರು.

ADVERTISEMENT

ಬಳಿಕ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುವಿನ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಅಲ್ಲಿನ ವೈದ್ಯರು ದೃಢಪಡಿಸಿದ್ದಾರೆ. ಭಾನುವಾರ ಸಂಜೆ 4 ಗಂಟೆ ನಂತರ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ನಡೆಸುವ ಕುರಿತು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.

ಭೂಷಣ್ ಅವರ ಸಹೋದರಿಯ ವಿವಾಹ ಎರಡು ವಾರಗಳ ಹಿಂದೆಯಷ್ಟೇ ನಡೆದಿದೆ. ಅವರ ತಂದೆ ಮಾರಪ್ಪ ರೈ ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಅವರಿಗೆ ತಾಯಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.