ADVERTISEMENT

ಪುತ್ತೂರು | ಕಚೇರಿಯ ಮುಂದೆ ಕೆಎಸ್‌ಆರ್‌ಟಿಸಿ ನೌಕರರ ಧರಣಿ ಸತ್ಯಾಗ್ರಹ

ಕೆಎಸ್‌ಆರ್‌ಟಿಸಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:49 IST
Last Updated 25 ಜನವರಿ 2023, 5:49 IST
ಕೆಎಸ್‌ಆರ್‌ಟಿಸಿ ನೌಕರರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ನೌಕರರು ಪುತ್ತೂರು ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿದರು
ಕೆಎಸ್‌ಆರ್‌ಟಿಸಿ ನೌಕರರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ನೌಕರರು ಪುತ್ತೂರು ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿದರು   

ಪುತ್ತೂರು: ಕೆಎಸ್‌ಆರ್‌ಟಿಸಿ ನೌಕರರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.

ಸಾರಿಗೆ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರವು ಸಾರಿಗೆ ನೌಕರರ ಬೇಡಿಕೆಗಳ ಕುರಿತು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆ ಗಳ ಜಂಟಿ ಕ್ರಿಯಾ ಸಮಿತಿಯೊಂದಿಗೆ ಚರ್ಚಿಸಿ, ಕೈಗಾರಿಕಾ ಒಪ್ಪಂದ ಮಾಡದೆ ಕಾಲ ಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್ಸ್ ಯೂನಿಯನ್ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ಮಾತನಾಡಿ, 2016ರಲ್ಲಿ ನಮ್ಮ ಒತ್ತಡಕ್ಕೆ ಮಣಿದು ಅಂದಿನ ರಾಜ್ಯ ಸರ್ಕಾರ ಶೇ 12.5ರಷ್ಟು ವೇತನ ಪರಿಷ್ಕರಣೆ ಮಾಡಿತ್ತು. ಬಳಿಕ ಏಳು ವರ್ಷ ಕಳೆದರೂ ವೇತನ ಪರಿಷ್ಕರಣೆ ಆಗಿಲ್ಲ. ನಮ್ಮ ಪರಿಸ್ಥಿತಿಯನ್ನು ಯಾರೂ ಕೇಳದ ಸ್ಥಿತಿ ನಿರ್ಮಾಣವಾಗಿದೆ. ತಿಂಗಳ ಖರ್ಚಿಗೂ ದುಡ್ಡಿಲ್ಲದ ಸ್ಥಿತಿ ಉಂಟಾಗಿದೆ. ಕೃಷಿ ಭೂಮಿಯನ್ನು ಅಡವಿಟ್ಟು ಜೀವನ ಸಾಗಿಸುವಂತಾಗಿದೆ. ಆಯಾ ರೂಟ್‌ಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಗದಿತ ಸಂಖ್ಯೆಗಿಂತ ಹೆಚ್ಚಾಗಿದ್ದರೂ ಸಂಸ್ಥೆ ನಷ್ಟದಲ್ಲಿದೆ ಎನ್ನುವ ಹೇಳಿಕೆ ನೀಡಿ ನೌಕರರ ಬದುಕಿನಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ: ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನೌಕರರು 18 ಗಂಟೆಗಳ ಕಾಲ ದುಡಿದರೂ ಆಡಳಿತ ವರ್ಗಕ್ಕೆ ತೃಪ್ತಿ ಇಲ್ಲ. ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನಮಗೆ ನೆಮ್ಮದಿ ಇಲ್ಲದ ಪರಿಸ್ಥಿತಿ ಉಂಟಾಗಿರುವ ಕುರಿತು ಹೇಳಿಕೊಳ್ಳಲು ಕೂಡ ಭಯದ ವಾತಾವರಣವಿದೆ. ಸಮಸ್ಯೆಯನ್ನು ಆಡಳಿತ ವರ್ಗಕ್ಕೆ ತಿಳಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದ ಅವರು ತಿಳಿಸಿದರು.

ನಿವೃತ್ತ ಚಾಲಕ ಹೆನ್ರಿ ಗಲ್ಭಾವೋ, ನಿವೃತ್ತ ಚಾಲಕ ಅನಿಲ್ ಪಾಯಸ್ ಮಾತನಾಡಿದರು. ನೌಕರರ ಫೆಡರೇಶನ್ ಪುತ್ತೂರು ವಿಭಾಗದ ಅಧ್ಯಕ್ಷ ದಿನೇಶ್ ಸಿ.ಎಚ್, ಕೆಎಸ್‌ಆರ್‌ಟಿಸಿ ಎಸ್‌ಸಿ ಆಂಡ್ ಎಸ್.ಟಿ ನೌಕರರ ಸಂಘದ ಉಪಾಧ್ಯಕ್ಷ ಬಾಬು ಮೇರ, ಸ್ಟಾಫ್ ಮತ್ತು ವರ್ಕಸ್ ಯೂನಿಯನ್ ಪುತ್ತೂರು ವಿಭಾಗದ ಅಧ್ಯಕ್ಷ ಹೇಮ ಪಿಂಟೊ, ಉಪಾಧ್ಯಕ್ಷ ಸಂತೋಷ್ ಭಟ್, ಜತೆ ಕಾರ್ಯದರ್ಶಿ ಮ್ಯಾಕ್ಸ್ ಬ್ರೋನಿ, ಘಟಕ ಕಾರ್ಯದರ್ಶಿ ಪ್ರಶಾಂತ್ ಇದ್ದರು.

ಕೆಎಸ್‌ಆರ್‌ಟಿಸಿ ನೌಕರರ ವಿವಿಧ ಸಂಘಟನೆಗಳ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಂಘಟನೆಯ ಪ್ರಮುಖರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.