ADVERTISEMENT

ಮಂಗಳೂರು: ‘ವಾಣಿಜ್ಯ’ದೆಡೆಗೆ ವಿದ್ಯಾರ್ಥಿಗಳ ಸೆಳೆತ

ಫಲಿತಾಂಶ ನೂರು: ಪ್ರವೇಶಕ್ಕೆ ಸಾಲು, ಪದವಿ ಕೋರ್ಸ್‌ಗಳಿಗೆ ಹೆಚ್ಚಿದ ಬೇಡಿಕೆ

ಸಂಧ್ಯಾ ಹೆಗಡೆ
Published 9 ಆಗಸ್ಟ್ 2021, 4:33 IST
Last Updated 9 ಆಗಸ್ಟ್ 2021, 4:33 IST
ಅನಸೂಯಾ ರೈ
ಅನಸೂಯಾ ರೈ   

ಮಂಗಳೂರು: ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ ಎಲ್ಲರನ್ನೂ ಉತ್ತೀರ್ಣರನ್ನಾಗಿ ಮಾಡಿದ ಸರ್ಕಾರದ ನಿರ್ಧಾರವು ಕೆಲವರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಹಲವರು ಉನ್ನತ ಶಿಕ್ಷಣಕ್ಕಾಗಿ ತಾವು ಬಯಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಪೈಪೋಟಿ ಎದುರಿಸಬೇಕಾಗಿದೆ.

ಕೋವಿಡ್–19 ಎರಡನೇ ಅಲೆಯ ಆತಂಕದ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೊಟಕುಗೊಳಿಸಿ, ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕ ಆಧರಿಸಿ, ಫಲಿತಾಂಶ ಪ್ರಕಟಿಸಲಾಗಿದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 445 ವಿದ್ಯಾರ್ಥಿಗಳು ಶೇ 100ರ ಫಲಿತಾಂಶ ಪಡೆದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸರ್ಕಾರದ ನಿರ್ಧಾರ ಅನುಕೂಲವಾಗಿದೆ.

ಜಿಲ್ಲೆಯಲ್ಲಿ ಹೊಸ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತರು ಸೇರಿ ಈ ವರ್ಷ ಒಟ್ಟು 32,342 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪೂರೈಸಿದ್ದಾರೆ. ಅತಿ ಹೆಚ್ಚು ಬೇಡಿಕೆ ಇರುವ ವಾಣಿಜ್ಯ ವಿಭಾಗ ಒಂದರಿಂದಲೇ 14,433 ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಹೀಗಾಗಿ, ಸಹಜವಾಗಿ ಪದವಿ ಕಾಲೇಜುಗಳ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕಗೊಂಡಿದೆ.

ADVERTISEMENT

ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಒಟ್ಟು 207 ಕಾಲೇಜುಗಳು ಇವೆ. ಅವುಗಳಲ್ಲಿ ಎರಡು ಘಟಕ ಕಾಲೇಜುಗಳು, ಒಂದು ಪಿ.ಜಿ ಸೆಂಟರ್, ಐದು ಸ್ವಾಯತ್ತ, 38 ಸರ್ಕಾರಿ, 133 ಅನುದಾನರಹಿತ, 28 ಅನುದಾನಿತ ಕಾಲೇಜುಗಳು ಇವೆ.

ಎಲ್ಲ ಕಾಲೇಜುಗಳಲ್ಲಿ ಪ್ರವೇಶಾತಿಗೆ ಆನ್‌ಲೈನ್ ಹಾಗೂ ಭೌತಿಕವಾಗಿ ಅರ್ಜಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ತೀವ್ರ ಪೈಪೋಟಿ ಇರುವ ಕಾರಣ ವಿದ್ಯಾರ್ಥಿಗಳು ಆನ್‌ಲೈನ್ ಮತ್ತು ಭೌತಿಕವಾಗಿ ಎರಡೂ ವಿಧಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳು 2–3 ಕಾಲೇಜುಗಳಿಗೆ ಅರ್ಜಿ ನೀಡಿದ್ದಾರೆ.

‘ವಿದ್ಯಾರ್ಥಿಗಳ ಬೇಡಿಕೆಯಂತೆ ಆನ್‌ಲೈನ್, ಆಫ್‌ಲೈನ್‌ ಎರಡೂ ರೀತಿಯಲ್ಲಿ ಅರ್ಜಿ ನೀಡಲಾಗುತ್ತಿದೆ. ಬಿ.ಕಾಂ.ಗೆ ಪ್ರವೇಶ ಬಯಸಿ 400 ಅರ್ಜಿಗಳು ಸಲ್ಲಿಕೆಯಾಗಿವೆ. ಬಿ.ಕಾಂ. ತರಗತಿಗಳು ಮೂರು ವಿಭಾಗಗಳಲ್ಲಿ ನಡೆಯುತ್ತವೆ. ಒಟ್ಟು 180 ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಸಾಮರ್ಥ್ಯ ಇದೆ. ಬಿ.ಎಸ್ಸಿಗೆ 120, ಬಿ.ಎ.ಗೆ 180 ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ ನಿಗದಿಪಡಿಸಲಾಗಿದೆ. ಇದೇ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ’ ಎಂದು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಚಾರ್ಯೆ ಅನಸೂಯಾ ರೈ ತಿಳಿಸಿದರು.

ಆನ್‌ಲೈನ್ ದಾಖಲಾತಿ: ‘ಈ ಬಾರಿ ಯುಯುಸಿಎಂಎಸ್ (ಯುನಿಫೈಡ್‌ ಯುನಿವರ್ಸಿಟಿ ಆ್ಯಂಡ್ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಅಡಿಯಲ್ಲಿ ವಿದ್ಯಾರ್ಥಿಗಳ ಪ್ರವೇಶ ನೋಂದಣಿ ನಡೆಸಲಾಗುತ್ತದೆ. ತಾಂತ್ರಿಕ ಸಮಸ್ಯೆ ಇರುವ ಕಾರಣ ಒಂದೆರಡು ದಿನಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ವರ್ಷ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹಿಂದಿನಷ್ಟೇ ಇದೆ. ಪದವಿಗೆ ಬೇಡಿಕೆ ಹೆಚ್ಚಾದ ಕಾರಣ ಮುಚ್ಚುವ ಹಂತದಲ್ಲಿದ್ದ ಕೆಲವು ಕಾಲೇಜುಗಳು ಚೇತರಿಕೆ ಕಾಣುವ ಸಾಧ್ಯತೆಗಳು ಇವೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್‌. ಯಡಪಡಿತ್ತಾಯ ಪ್ರತಿಕ್ರಿಯಿಸಿದರು.

‘ಪ್ರತಿವರ್ಷವೂ ಬಿ.ಕಾಂ. ಪ್ರವೇಶಕ್ಕೆ ಅಧಿಕ ಅರ್ಜಿಗಳು ಬರುತ್ತವೆ. ಈ ಬಾರಿ ಎಲ್ಲರಿಗೂ ಬಿ.ಕಾಂ.ಗೆ ಪ್ರವೇಶ ದೊರೆಯುವುದು ಕಷ್ಟವಾಗಬಹುದು. ಹೀಗಾಗಿ ಬಿಬಿಎಗೆ ಬೇಡಿಕೆ ಹೆಚ್ಚಬಹುದು. ಪ್ರಸ್ತುತ ಕಾಲಮಾನದಲ್ಲಿ ಕಂಪ್ಯೂಟರ್ ಜ್ಞಾನವು ಉದ್ಯೋಗಾವಕಾಶದ ಸಾಧ್ಯತೆಗಳನ್ನು ತೆರೆದಿರುವುದರಿಂದ ಬಿಸಿಎ ಕೋರ್ಸ್‌ಗೆ ಸಹ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

‘ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹೊಸ ಸರ್ಟಿಫಿಕೆಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷ ಅಕ್ಟೋಬರ್‌ನಿಂದ ಅನುಷ್ಠಾನಗೊಳ್ಳಲಿದೆ. ಹೊಸ ಶಿಕ್ಷಣ ನೀತಿಯ ನಾಲ್ಕು ವರ್ಷಗಳ ಆನರ್ಸ್ ಪದವಿಯಲ್ಲಿ, ವಿದ್ಯಾರ್ಥಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದರೂ, ಕಲಿತ ಶಿಕ್ಷಣ ಆಧರಿಸಿ ಸರ್ಟಿಫಿಕೆಟ್ ದೊರೆಯುವುದರಿಂದ, ಉದ್ಯೋಗ ಪಡೆಯಲು ಕಷ್ಟವಾಗದು. ಜೀವನ ಕೌಶಲ ಕಲಿಸುವ ಪಠ್ಯಕ್ರಮಗಳು ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುತ್ತವೆ. ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು’ ಎಂದು ವಿವರಿಸಿದರು.

ಶುಲ್ಕ ಹೆಚ್ಚಳ ಇಲ್ಲ: ‘ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಾಲೇಜುಗಳಲ್ಲಿ ಪದವಿ ತರಗತಿಗಳ ಶುಲ್ಕ ಹೆಚ್ಚಳ ಮಾಡಲಾಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಸಾಂಸ್ಕೃತಿಕ ಚಟುವಟಿಕೆ ಇಲ್ಲದ ಕಾರಣ ಸಾಂಸ್ಕೃತಿಕ ಶುಲ್ಕವನ್ನು ಶೂನ್ಯ ಮಾಡಲಾಗುವುದು. ವಿಶೇಷ ಪ್ರಕರಣವೆಂದು ಪರಿಗಣಿಸಿ, ಈ ವರ್ಷಕ್ಕೆ ಮಾತ್ರ ಇದನ್ನು ಕಡಿಮೆ ಮಾಡಲಾಗುತ್ತದೆ.ಶುಲ್ಕ ಪರಿಷ್ಕರಣಾ ಸಮಿತಿ ಸಭೆಯಲ್ಲಿ ಸಹ ಇದನ್ನು ತಿಳಿಸಲಾಗಿದೆ. ಶುಲ್ಕ ಪಾವತಿಗೆ ಈ ಬಾರಿ ದಂಡ ವಿನಾಯಿತಿ ನೀಡಲಾಗುತ್ತದೆ. ಎರಡು ಕಂತಿನಲ್ಲಿ, ಕಡು ಬಡವರಾದರೆ ನಾಲ್ಕು ಕಂತಿನಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಬಿಬಿಎಗೆ ಭರಪೂರ ಬೇಡಿಕೆ: ಬಿ.ಕಾಂ ಜತೆಗೆ ಬಿಬಿಎಗೆ ಪ್ರವೇಶ ಕೋರಿ ಅತಿ ಹೆಚ್ಚು ಅರ್ಜಿಗಳು ಬಂದಿವೆ. ಬಿಬಿಎ ಬೇಡಿಕೆ ದ್ವಿಗುಣಗೊಂಡಿದೆ. ಇನ್ನುಳಿದ ವಿಭಾಗಗಳಿಗೆ ಕಳೆದ ವರ್ಷದಷ್ಟೇ ಬೇಡಿಕೆ ಇದೆ ಎಂದು ಕಾರ್‌ಸ್ಟ್ರೀಟ್ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಹೆಬ್ಬಾರ್ ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಪದವಿ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಪ್ರತಿವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಜಿಲ್ಲೆಯಲ್ಲಿ ಶೇ 90ಕ್ಕಿಂತ ಅಧಿಕವೇ ಇರುತ್ತದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಬಹಳಷ್ಟು ಜನರು ಹೊರ ಜಿಲ್ಲೆಯವರು ಇರುತ್ತಾರೆ. ಅವರಲ್ಲಿ ಅನೇಕರು ವೃತ್ತಿಪರ ಕೋರ್ಸ್‌ಗಳಿಗೆ ಹೋಗುತ್ತಾರೆ. ಹೀಗಾಗಿ, ಪದವಿ ಪ್ರವೇಶಕ್ಕೆ ಅತಿಯಾದ ಒತ್ತಡ ಸೃಷ್ಟಿಯಾಗಲಾರದು’ ಎಂದು ಕಿಟ್ಟೆಲ್ ಪಿಯು ಕಾಲೇಜಿನ ಪ್ರಾಚಾರ್ಯ ವಿಠ್ಠಲ್ ಅಭಿಪ್ರಾಯಪಟ್ಟರು.

‘ದೂರ ಶಿಕ್ಷಣ ಮುಂದುವರಿದರೆ ಉತ್ತಮ’
‘ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಆರು ವಿಶ್ವವಿದ್ಯಾಲಯಗಳಲ್ಲಿ ದೂರ ಶಿಕ್ಷಣ ಕಾರ್ಯಕ್ರಮ ಇತ್ತು. ಈ ವರ್ಷ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಸೀಮಿತಗೊಳಿಸಲಾಗಿದೆ. ಪದವಿ ಶಿಕ್ಷಣಕ್ಕೆ ಒತ್ತಡ ಹೆಚ್ಚಿರುವ ಕಾರಣ, ಈ ವರ್ಷದ ಮಟ್ಟಿಗೆ ಈ ನಿಯಮದಲ್ಲಿ ಸಡಿಲಿಕೆ ಮಾಡಿ, ಹಿಂದಿನಂತೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಿದರೆ, ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಂದರ್ಭವನ್ನು ತಪ್ಪಿಸಬಹುದು ಎಂದು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅಭಿಪ್ರಾಯಪಟ್ಟರು.

‘ಹೆಚ್ಚುವರಿ ವಿಭಾಗಕ್ಕೆ ಬೇಡಿಕೆ’
ಕೆಲವು ಪದವಿ ಕಾಲೇಜುಗಳಲ್ಲಿ ಹೆಚ್ಚುವರಿ ವಿಭಾಗ ಪ್ರಾರಂಭಿಸಲು ಬೇಡಿಕೆ ಬಂದಿದೆ. ವಿಸ್ತರಣಾ ಸಂಯೋಜನೆ ಅಥವಾ ಶೇ 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಸೇರ್ಪಡೆ ಮಾಡುವುದಾದರೆಸ್ಥಳೀಯ ಸಮಿತಿ ಪರಿಶೀಲಿಸಿ, ಅನುಮೋದನೆ ನೀಡಿದರೆ, ಅನುಮತಿ ನೀಡಲಾಗುತ್ತದೆ. ಕೊಠಡಿ, ಪೀಠೋಪಕರಣ, ಹೆಚ್ಚುವರಿ ಉಪನ್ಯಾಸಕರ ನೇಮಕಾತಿಯ ಸಾಧ್ಯತೆ ಇದ್ದರೆ ಮಾತ್ರ ಅನುಮತಿ ದೊರೆಯುತ್ತದೆ ಎಂದು ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

‘ಕಲಾ ‍‍‍ಪದವಿಗೆ ಉತ್ಸುಕ’
‘ಬಿ.ಎ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದೇನೆ. ಸೀಟು ಸಿಗುವ ಭರವಸೆ ಇದೆ. ಬಿ.ಕಾಂ ಸೇರಲು ಆಸಕ್ತರಾಗಿದ್ದ ಸ್ನೇಹಿತರು, ಕೋವಿಡೋತ್ತರ ಕಾಲದಲ್ಲಿ ಬಿ.ಎ ಪದವಿ ಮಾಡಲು ಉತ್ಸುಕರಾಗಿದ್ದಾರೆ. ಕೋವಿಡ್, ಸರ್ಕಾರಿ ಉದ್ಯೋಗದ ಮಹತ್ವವನ್ನು ತಿಳಿಸಿದೆ. ಸರ್ಕಾರಿ ಉದ್ಯೋಗ ಪಡೆಯಲು ಕಲಾ ಪದವಿ ಪಡೆದರೆ ಒಳ್ಳೆಯದು ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ ಸೇರುವ ಬಯಕೆಯಿಂದ ಹಲವರು ಬಿ.ಎ. ಮಾಡುವ ಯೋಚನೆಯಲ್ಲಿ ಇದ್ದಾರೆ’ ಎಂದು ವಿದ್ಯಾರ್ಥಿ ವಿಜಯ್ ಕಾರ್ತಿಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.