ADVERTISEMENT

ಧರ್ಮ ಅರ್ಥೈಸುವಲ್ಲಿ ಸೋಲು, ಸ್ಪರ್ಧೆ

ಕೆ.ಎಂ. ಅಬೂಬಕರ್‌ ಸಿದ್ದಿಕ್‌ ಮೋಂಟುಗೋಳಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 14:06 IST
Last Updated 13 ಫೆಬ್ರುವರಿ 2021, 14:06 IST

ಮಂಗಳೂರು: ‘ಧರ್ಮದ ಸಾರವನ್ನು ಅರ್ಥೈಸುವಲ್ಲಿ, ವ್ಯಾಖ್ಯಾನಿಸುವಲ್ಲಿ ಸೋತಿದ್ದು, ಅದನ್ನು ಸ್ಪರ್ಧೆಗೆ ಒಡ್ಡಲಾಗುತ್ತಿದೆ. ಇಂತಹ ಬೆಳವಣಿಗೆಯಿಂದಲೇ ಕರಾವಳಿ ಬಗ್ಗೆ ಅಪನಂಬಿಕೆ ಹೆಚ್ಚಿದೆ. ಮಾನವೀಯ ಅಂತಕರಣದ ಕನ್ನಡ ನಡೆ ಇಂದಿನ ಅಗತ್ಯ. ಬಹುತ್ವವೇ ಭಾರತದ ಶ್ರೀಮಂತಿಕೆ’ ಎಂದು ಕೆ.ಎಂ. ಅಬೂಬಕರ್‌ ಸಿದ್ದಿಕ್‌ ಮೋಂಟುಗೋಳಿ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಮೌಖಿಕ ಪರಂಪರೆ ಮತ್ತು ತೌಳವ ಜೀವನ’ ವಿಚಾರಗೋಷ್ಠಿಯಲ್ಲಿ ‘ಬಹುತ್ವ ಸಂಸ್ಕೃತಿ’ ಕುರಿತು ಅವರು ಮಾತನಾಡಿದರು.

‘ಕರಾವಳಿ ಬಹುಭಾಷಾ ನೆಲ.ಭಾಷೆ ಬೆಸೆಯುತ್ತದೆ. ಅದರೆ, ಧರ್ಮವನ್ನು ತಪ್ಪಾಗಿ ಅರ್ಥೈಸುವವರ ಪರಿಣಾಮ ಸಮಾಜ ಒಡೆಯುತ್ತಿದೆ’ ಎಂದರು.

ADVERTISEMENT

‘ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವ ಧರ್ಮದಲ್ಲೂ ತಮ್ಮ ಧರ್ಮದವರನ್ನು ಮಾತ್ರ ಪ್ರೀತಿಸು, ಇತರರನ್ನು ದ್ವೇಷಿಸು ಎಂದು ಇಲ್ಲ. ಮಾನವೀಯತೆಯೇ ಧರ್ಮಗಳ ಸಾರ’ ಎಂದು ವಿವಿಧ ಉದಾಹರಣೆ, ಉಲ್ಲೇಖಗಳನ್ನು ನೀಡಿದರು.

‘ಮದರಸಗಳಲ್ಲಿ ಕನ್ನಡ ಪಠ್ಯಕ್ರಮವಿದೆ. ಈಚೆಗೆ ಪ್ರಮುಖ ಪ್ರವಚನಗಳು, ಪ್ರಾರ್ಥನೆಯೂ ಕನ್ನಡದಲ್ಲಿ ನಡೆಯುತ್ತಿವೆ. ಉಳ್ಳಾಲ ದರ್ಗಾ, ಬಪ್ಪನಾಡು, ಉದ್ಯಾವರದ ಮಾಡ ಹೀಗೆ ಹಲವಾರು ಧಾರ್ಮಿಕ ಕ್ಷೇತ್ರಗಳು ಸಾಮರಸ್ಯದ ಬೀಡಾಗಿವೆ’ ಎಂದರು.

ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡಿ, ‘ತುಳುವಿನ ಮೌಖಿಕ ಪರಂಪರೆಯನ್ನು ಅವಲೋಕಿಸಿದಾಗ ಸಂಸ್ಕೃತಿ ಶ್ರೀಮಂತಿಕೆಯನ್ನು ಕಾಣಬಹುದು. ಇಲ್ಲಿ ಬೊಬ್ಬರ್ಯ, ಆಲಿ ಎಂಬ ಮುಸ್ಲಿಂ ದೈವಗಳೂ ಇವೆ. ಜುಮಾದಿ ಸಾಮರಸ್ಯದ ಸಂಕೇತವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ‘ಹಸಿವೆ, ಮಣ್ಣು, ಶ್ರಮ, ಕೃಷಿ, ಸ್ವಾವಲಂಬನೆ, ಸ್ವಾಭಿಮಾನವು ಇಲ್ಲಿನ ಸಂಸ್ಕೃತಿಯನ್ನು ರೂಪಿಸಿದೆ. ಕೃಷಿ ನಾಶವಾದರೆ, ತೌಳವ ಸಂಸ್ಕೃತಿಯೂ ನಾಶವಾಗುತ್ತದೆ’ ಎಂದು ಎಚ್ಚರಿಸಿದರು.

ಕರಾವಳಿಯ ಸರ್ಕಸ್ ಕಂಪನಿ

‘ಸಿಂಹ ಬಂದಿಲ್ಲ. ಹೀಗಾಗಿ, ಇಂದಿನ ಪ್ರದರ್ಶನಕ್ಕೆ ನೀನು ಸಿಂಹದ ವೇಷ ಹಾಕಿ ಬೋನಿನಲ್ಲಿ ಇರು’ ಎಂದು ಸರ್ಕಸ್ ಕಂಪನಿಯ ಉಮೇಶನಿಗೆ ಮಾಲೀಕರು ಹೇಳಿದರಂತೆ. ಆತ ಒಪ್ಪಿಕೊಂಡ. ಆದರೆ, ‘ಪಕ್ಕದ ಬೋನಿನ ಹುಲಿ ದಾಳಿ ಮಾಡಿ ಬಿಟ್ಟರೆ...’ ಎಂಬ ಭಯ ಆತನಿಗೆ ಕಾಡುತ್ತಿತ್ತು. ಒಂದು ದಿನ ಪಕ್ಕದ ಬೋನಿನ ಬಾಗಿಲನ್ನು ಯಾರೋ ತೆರೆದಿದ್ದು, ಅದಲ್ಲಿದ್ದ ಹುಲಿ ಈತನ ಬೋನಿನ ಬಳಿ ಬಂದಿತು. ಸಿಂಹ ವೇಷ ಹಾಕಿದ್ದ ಉಮೇಶ ಬೆವರಿ ನೀರಾಗಿ, ನಡುಗುತ್ತಿದ್ದನು.

ಆದರೆ, ಸಮೀಪ ಬಂದ ‘ಹುಲಿ’, ‘ಹೇ... ನಾನು ಅಬೂಬಕರ್. ನನಗೆ ಮೊನ್ನೆಯೇ ಹುಲಿ ವೇಷ ಹಾಕಿಸಿದ್ದಾರೆ. ಸಾಕಾಗಿ ಹೋಯಿತು. ಒಂದು ಬೀಡಿ ಇದ್ರೆ ಕೊಡು’ ಎನ್ನುವಾಗ ಉಮೇಶನ ಸ್ಥಿತಿ ಹೇಳತೀರದು. ಹೀಗೆ ಕರಾವಳಿಯಲ್ಲಿ ‘ವೇಷ’ ತೊಡಿಸಿ ಭಯಭೀತರನ್ನಾಗಿಸಿದ್ದಾರೆ. ಮಾನವೀಯತೆ ಮೂಲಕ ಅದನ್ನು ನಾವು ಕಳಚಬೇಕಾಗಿದೆ’ ಎಂದು ಕೆ.ಎಂ. ಅಬೂಬಕರ್‌ ಸಿದ್ದಿಕ್‌ ಮೋಂಟುಗೋಳಿ ಕತೆ ಮೂಲಕ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.