ADVERTISEMENT

ಕಿಡಿಗೇಡಿಗಳಿಂದ ಪಾವೂರು ಉಳಿಯ- ಅಡ್ಯಾರು ಸಂಪರ್ಕ ಸೇತುವೆಗೆ ಹಾನಿ 

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 11:20 IST
Last Updated 2 ಫೆಬ್ರುವರಿ 2019, 11:20 IST
   

ಮುಡಿಪು: ಪಾವೂರು ಉಳಿಯ ದ್ವೀಪವಾಸಿಗಳು ನಗರ ಸಂಪರ್ಕಕ್ಕೆಂದು ಸ್ವಂತ ಹಣ ಖರ್ಚು ಮಾಡಿ ಕಟ್ಟಿದ ತಾತ್ಕಾಲಿಕ ಸೇತುವೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಸ್ಥಳೀಯರ ವಾಹನಗಳನ್ನು ಪುಡಿಮಾಡಿ ಅಟ್ಟಹಾಸಗೈದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಪಾವೂರು ನೇತ್ರಾವತಿ ನದಿಯ ಉಳಿಯ ಎಂಬ ದ್ವೀಪ ಪ್ರದೇಶದಲ್ಲಿ ಸುಮಾರು ನಲ್ವತ್ತು ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿನ ವಾಸಿಗಳು ಮಂಗಳೂರಿಗೆ ಅಥವಾ ಪಾವೂರಿಗೆ ಬರಲು ದೋಣಿಗಳನ್ನೇ ಆಶ್ರಯಿಸಿಕೊಂಡು ಬಂದಿದ್ದರು ಮಾತ್ರವಲ್ಲದೆ ಸೇತುವೆಯಿಲ್ಲದೆ ಬಹಳಷ್ಟು ಸಮಸ್ಯೆಯನ್ನು ಎದುರಿಸಬೇಕಾಗಿತ್ತು. 2012ರಲ್ಲಿ ರಾಜ್ಯ ಸರಕಾರದ ಮಳೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯಿಂದ ಉಳಿಯದಿಂದ -ಅಡ್ಯಾರು ಸಂಪರ್ಕದ ತೂಗುಸೇತುವೆ ನಿರ್ಮಾಣದ ಪ್ರಸ್ತಾಪವಾಗಿ ₹1.5ಕೋಟಿ ಅನುದಾನ ಮಂಜೂರಾಗಿತ್ತಾದರೂ ತಾಂತ್ರಿಕ ಅಡಚಣೆಗಳಿಂದ ಅದು ಕಾರ್ಯರೂಪಕ್ಕೆ ಬರದೆ ಭರವಸೆಯಾಗಿಯೇ ಉಳಿದಿತ್ತು. ಇದರಿಂದ ರೋಸಿ ಹೋದ ಉಳಿಯ ನಿವಾಸಿಗಳು 15 ದಿವಸಗಳ ಹಿಂದಷ್ಟೆ ಸ್ಥಳೀಯ ಧರ್ಮಗುರುಗಳ ನೇತೃತ್ವದಲ್ಲಿ ತಮ್ಮ ಸ್ವಂತ ಹಣದಿಂದಲೇ ಬಹಳ ಕಷ್ಟಪಟ್ಟು ಅಡ್ಯಾರು ಸಂಪರ್ಕಕ್ಕೆ ಕಬ್ಬಿಣದ ಪೈಪ್ ಮತ್ತು ಹಲಗೆಗಳನ್ನು ಬಳಸಿ ಸುಸಜ್ಜಿತ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದರು. ಶುಕ್ರವಾರ ರಾತ್ರಿ ಕಿಡಿಗೇಡಿಗಳು ಸೇತುವೆಯ ಹಲಗೆ ಮತ್ತು ಹ್ಯಾಂಡ್ ರೇಲಿಂಗ್‌ಗಳನ್ನು ಕಿತ್ತು ಬಿಸಾಡಿ ಹಾನಿಗೊಳಿಸಿದ್ದಲ್ಲದೆ, ಸ್ಥಳೀಯರು ನಿಲ್ಲಿಸಿದ್ದಒಂದು ರಿಕ್ಷಾ, ಸ್ಕೂಟರ್, ಎರಡು ಬೈಕ್‌ಗಳನ್ನು ಜಖಂಗೊಳಿಸಿ ಅಟ್ಟಹಾಸಮೆರೆದಿದ್ದಾರೆ.

ಮರಳು ಮಾಫಿಯಾದಿಂದ ಕೃತ್ಯ ಶಂಕೆ
ಅಡ್ಯಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಈ ಹಿಂದಿನ ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಅಕ್ರಮ ಮರಳುಗಾರಿಕೆಗೆ ನಿಷೇಧ ಹೇರಿದ್ದರೆನ್ನಲಾಗಿದೆ.

ADVERTISEMENT

ಇದೀಗ ಅಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಶುಕ್ರವಾರ ಮುಂಜಾನೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿ ಅಪಾರ ಮರಳನ್ನು ವಶಪಡಿಸಿಕೊಂಡಿದ್ದರು. ಅಕ್ರಮ ಮರಳಿನ ಅಡ್ಡೆಗೆ ದಾಳಿನಡೆದ ಸಂಧರ್ಭ ಇಲಾಖಾಧಿಕಾರಿಗಳು ಉಳಿಯದವರಿಗೆ ಸರಕಾರವು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ನೀಡಿದ್ದ ಪ್ಯಾಸೆಂಜರ್ ಬೋಟನ್ನು ಬಳಸಿದ್ದು ಉಳಿಯದ ಆಪರೇಟರ್‌ಗಳಿಂದಲೇ ಬೋಟ್ ಚಲಾಯಿಸಿದ್ದರೆನ್ನಲಾಗಿದೆ. ಉಳಿಯ ನಿವಾಸಿಗಳೇ ಇಲಾಖೆಗೆ ಮಾಹಿತಿ ನೀಡಿದ್ದಾರೆಂದು ತಪ್ಪಾಗಿ ಗ್ರಹಿಸಿದ ಕಿಡಿಗೇಡಿ ಮರಳು ಮಾಫಿಯಾಗಳು ಸೇತುವೆಗೆ ಹಾನಿಗೊಳಿಸಿರುವುದಾಗಿ ಹೇಳಲಾಗುತ್ತಿದೆ. ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

ಉಸ್ತುವಾರಿ ಸಚಿವ ಖಾದರ್ ಭೇಟಿ
ಸೇತುವೆ ಹಾನಿಗೊಳಗಾದ ಉಳಿಯ ಪ್ರದೇಶಕ್ಕೆ ಶನಿವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದ್ದಾರೆ.

ದುಷ್ಕರ್ಮಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲು ಅದೇ ರೀತಿ ದ್ವೀಪದ ಜನರು ವಾಹನ ನಿಲ್ಲಿಸುವ ಪ್ರದೇಶ ಹಾಗೂ ಸೇತುವೆ ಬಳಿ ಸಿಸಿಟಿವಿ ಅಳವಡಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಉಳಿಯ ದ್ವೀಪದ ಧರ್ಮಗುರುಗಳ ಮಾರ್ಗದರ್ಶನದಲ್ಲಿ ತಕ್ಷಣ ಹಾನಿಗೊಳಗಾದ ಸೇತುವೆಯ ದುರಸ್ತಿಗೊಳಿಸಲು ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಅವರಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಉಳಿಯ ದ್ವೀಪದ ಪ್ರಮುಖರ ಸಭೆಯನ್ನು ಭಾನುವಾರ ಸರ್ಕ್ಯೂಟ್ ಹೌಸ್‌ನಲ್ಲಿ ಏರ್ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.