ಕಾಸರಗೋಡು: ಇಲ್ಲಿನ ಪೆರಿಯದ ಬೆಕಲ್ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠ ಆಯೋಜಿಸಿರುವ ವೈಶಾಖ ನಟನಂ ನೃತ್ಯೋತ್ಸವದ ನಾಲ್ಕನೇ ದಿನ ವಿವಿಧ ರಾಜ್ಯಗಳ ಕಲಾವಿದರ ನೃತ್ಯವೈಭವ ಸಹೃದಯರ ಮನಸೂರೆಗೊಂಡಿತು.
ಬೆಂಗಳೂರಿನ ರಮಾ ವೇಣುಗೋಪಾಲ್ ಮತ್ತು ಶಿಷ್ಯವೃಂದದ 'ಕಲಾ ಕಲ್ಪಕ್ಷೇತ್ರ' ತಂಡ ಮತ್ತು ಬೆಂಗಳೂರಿನ ವೈಷ್ಣವಿ ನೃತ್ಯಶಾಲೆ ತಂಡದ ಭರತನಾಟ್ಯ ಆಮೋದ ನೀಡಿದ ವೇದಿಕೆಯಲ್ಲಿ ಮುಂಬೈಯ ಆದಿತಿ ಅಖಿಲ್ ಮತ್ತು ವೈಷ್ಣವಿ ಸೂರ್ಯನಾರಾಯಣನ್ ನೃತ್ಯ ಸೇವೆಯೂ ನಡೆಯಿತು. ಚೆನ್ನೈನ ಮಹಿತಾ ಸುರೇಶ್, ಕೊಚ್ಚಿಯ ರಮಾ ನೃತ್ಯವಿಹಾರ, ಉಡುಪಿಯ ಪನ್ನಗ ರಾವ್ ಮತ್ತು ಅನಘಶ್ರೀ ಅವರ ನೃತ್ಯ ಪ್ರದರ್ಶನವೂ ರಂಗೇರಿತು.
ಹೆಸರಾಂತ ಕಲಾವಿದೆ ಉಷಾರಾಣಿ ಅವರಿಂದ ಮೋಹಿನಿಯಾಟಂ ರೋಮಾಂಚಕ ಅನುಭವ ನೀಡಿತು. ವಿಶಾಖಪಟ್ಟಣಂ ತಂಡದವರು ಸೌಂದರ್ಯ ಮದ್ದಾಳಿ ಮತ್ತು ಕುಚಿಪುಡಿ ನೃತ್ಯ ಪ್ರದರ್ಶನ ನೀಡಿದರು. ಮುಂಬೈಯ ಸುಜಾತಾ ನಾಯರ್ ಹಾಗೂ ಪುತ್ರಿ ಶರಣ್ಯಾ ಕೂಡ ಮೋಹಿನಾಟಂನಲ್ಲಿ ಜೊತೆಯಾದರು.
ನೃತ್ಯಗುರು ನಿಲೇಶ್ವರಂನ ಕಲಾಮಂಡಲಂ ಅಜಿತ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಸಿ.ಎಚ್ ಕುಂಞಂಬು ಭಾಗವಹಿಸಿದ್ದರು. ಮಂಗಳವಾರ ಸಂಜೆ ಗೋಶಾಲೆಯ ನಂದಿಮಂಟಪದಲ್ಲಿ ಅಶ್ವಿನಿ ನಂಬಿಯಾರ್ ಅವರಿಂದ ಮೋಹಿಯಾಟಂ, ನವ್ಯಾ ಭಟ್ ಅವರಿಂದ ಭರತನಾಟ್ಯ, ಮುಂಬೈಯ ಐಶ್ವರ್ಯಾ ಹರೀಶ್ ಅವರಿಂದ ಭರತನೃತ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.