ಮಂಗಳೂರು: ‘ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಸುವ ಕಾರ್ಯ ಕುಂಟುತ್ತಾ ಸಾಗಿದೆ. ಇನ್ನು ಮೂರು ತಿಂಗಳ ಒಳಗೆ ಇದನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ’ ಎಂದು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದರು.
ಮಹಾನಗರ ಪಾಲಿಕೆ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲಿಸಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
‘ನಗರ ನೆರೆ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದೇನೆ. ಮಳೆ ನೀರು ಕಾಲುವೆಗಳಲ್ಲಿ ನೀರಿನ ಸರಾಗ ಹರಿವಿಗೆ ಇರುವ ತೊಡಕುಗಳನ್ನು ನಿವಾರಿಸಲು ಸೂಚಿಸಿದ್ದೇನೆ. ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಿಸಿ ಬ್ಲಾಕ್ ಸ್ಪಾಟ್ ರಹಿತ ಸ್ವಚ್ಛ ಮಂಗಳೂರು ನಿರ್ಮಿಸಲು ಕ್ರಮ ವಹಿಸುತ್ತೇನೆ’ ಎಂದರು.
‘ಪಾಲಿಕೆಯು ನಗರದಲ್ಲಿ ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಅಧ್ಯಯನ ನಡೆಸುತ್ತಿದೆ. ಎರಡು ವಾರದಲ್ಲಿ ಇದರ ವರದಿ ಕೈಸೇರಿಸಲಿದೆ’ ಎಂದು ಪಾಲಿಕೆ ಆಯುಕ್ತ ರವಿಂದ್ರ ನಾಯಕ್ ಮಾಹಿತಿ ನೀಡಿದರು.
‘ನಗರಲ್ಲಿ 66 ಸಾವಿರ ಬೀದಿದೀಪಗಳನ್ನು ಎಲ್ಇಡಿ ದೀಪಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, 20 ಸಾವಿರ ಎಲ್‌ಇಡಿ ದೀಪಗಳ ಅಳವಡಿಕೆ ಪುರ್ಣಗೊಂಡಿದೆ. ಮಹಾಕಾಳಿಪಡ್ಪುವಿನಲ್ಲಿ ಪೌರ ಕಾರ್ಮಿಕರಿಗೆ 32 ವಸತಿಗಳು ಸಿದ್ಧವಾಗಿವೆ. ಬ್ಲಾಕ್ ಸ್ಪಾಟ್ ಗಳು ಕಂಡು ಬಂದಿದ್ದ 66 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.