ADVERTISEMENT

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ: ಅಕ್ರಮ ರಸ್ತೆ ನಿರ್ಮಾಣಕ್ಕೆ ಯತ್ನ– ಆರೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 14:15 IST
Last Updated 19 ಆಗಸ್ಟ್ 2023, 14:15 IST

ಬಂಟ್ವಾಳ: ‘ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಬಿ ಕಡೆಕಣ್ ಎಂಬಲ್ಲಿ ಸಾರ್ವಜನಿಕ ರಸ್ತೆ ನೆಪದಲ್ಲಿ, ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ, ಒಂದು ಮನೆಗೆ ರಸ್ತೆ ನಿರ್ಮಿಸಲು ನಮ್ಮ ಖಾಸಗಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಕುಮ್ಕಿ ಜಮೀನಿನಲ್ಲಿ ಜೆಸಿಬಿ ಮೂಲಕ ಸುಮಾರು 15 ಮಂದಿಯ ತಂಡ ರಸ್ತೆ ನಿರ್ಮಿಸಲು ಮುಂದಾಗಿದೆ’ ಎಂದು ಜಮೀನು ಮಾಲೀಕ ಕೆ.ಪ್ರಸನ್ನ ಕಾಮತ್ ಆರೋಪಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಮೀನಿನ ಪಕ್ಕದಲ್ಲಿ ವಿಷ್ಣು ಭಟ್ ಎಂಬವರ ಮನೆ ಮಾತ್ರ ಇದೆ. ಅವರಿಗೆ ಈಗಾಗಲೇ ನಾವು ಸ್ವಂತ ಖರ್ಚಿನಲ್ಲಿ ರಸ್ತೆ ಮಾಡಿ ಕೊಟ್ಟಿದ್ದೇವೆ. ಉಳಿದಂತೆ ಶಾಸಕ ರಾಜೇಶ ನಾಯ್ಕ್ ಅವರು ₹3.50 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟೆ ಮತ್ತು ಸಾರ್ವಜನಿಕ ಸಂಪರ್ಕ ರಸ್ತೆ ನಿರ್ಮಿಸಿದ್ದಾರೆ’ ಎಂದರು.

‘ನನ್ನ ತಂದೆ ನಿವೃತ್ತ ಸೇನಾನಿಯಾಗಿದ್ದು, ನಾವು ರಾಜಕೀಯದಿಂದ ದೂರ ಇದ್ದೇವೆ. ಸ್ಥಳೀಯ ನಿವಾಸಿ ವಿಷ್ಣು ಭಟ್ ರಾಜಕೀಯ ಪ್ರೇರಿತ ಹೊರಗಿನ ವ್ಯಕ್ತಿಗಳಾದ ಪುಷ್ಪರಾಜ ಚೌಟ, ದಿನೇಶ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಸುಬ್ರಹ್ಮಣ್ಯ ಭಟ್, ಗಣೇಶ ರೈ ಮಾಣಿ, ನಾರಾಯಣ ಭಟ್, ನಾರಾಯಣ ಶೆಟ್ಟಿ, ಎಡ್ವರ್ಡ್‌ ಮಾರ್ಟಿಸ್‌, ವಾಲ್ಟರ್ ಮಸ್ಕರೇನಸ್, ಚೆನ್ನಪ್ಪ ಮೂಲ್ಯ, ರಾಧಾ, ಸುಬ್ಬಣ್ಣ ಆಮ್ಲಿ, ಸುರೇಶ ಪೂಜಾರಿ, ಹರೀಶ್ಚಂದ್ರ, ಮಾಧವ, ಶಿವಪ್ಪ ಪೂಜಾರಿ ನಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸರ್ಕಾರಿ ಜಮೀನು ಎನ್ನುತ್ತಾ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಸಿವಿಲ್ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥಗೊಳ್ಳುವ ವರೆಗೆ ಈ ಜಮೀನು ಮಾಲೀಕರಿಗೆ ಒಳಪಟ್ಟಿದೆ ಎಂಬ ಆದೇಶವನ್ನೂ ಉಲ್ಲಂಘಿಸಿದ್ದಾರೆ’ ಎಂದರು.

ADVERTISEMENT

ಪ್ರಮುಖರಾದ ಪ್ರಕಾಶ್ ಕಾಮತ್, ಪುರುಷೋತ್ತಮ ಕಾಮತ್, ಪೃಥ್ವಿ ಕಾಮತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.