ADVERTISEMENT

ಕಿವುಡುತನ: 2 ವರ್ಷದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 30 ಮೇ 2023, 13:13 IST
Last Updated 30 ಮೇ 2023, 13:13 IST
ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಕಿವಿ, ಗಂಟಲು ಹಾಗೂ ಮೂಗಿನ (ಇಎನ್‍ಟಿ)ವಿಭಾಗದಲ್ಲಿ ನಡೆದ ಕಿವಿ ಹಾಗೂ ಬಾಯಿ ಬಾರದ 2ರ ಹರೆಯದ ಮಗುವಿಗೆ ನಡೆಸಿದ ಕಾಕ್ಯುಲರ್ ಇಂಫ್ಲ್ಯಾಂಟ್ ಚಿಕಿತ್ಸೆಯ ನಂತರದ ಸ್ವಿಚ್ ಆನ್ ಅನ್ನು ಸಂಸ್ಥೆಯ ಮುಖ್ಯಸ್ಥ ಎನ್. ವಿನಯ ಹೆಗ್ಡೆ ನಡೆಸಿದರು.
ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಕಿವಿ, ಗಂಟಲು ಹಾಗೂ ಮೂಗಿನ (ಇಎನ್‍ಟಿ)ವಿಭಾಗದಲ್ಲಿ ನಡೆದ ಕಿವಿ ಹಾಗೂ ಬಾಯಿ ಬಾರದ 2ರ ಹರೆಯದ ಮಗುವಿಗೆ ನಡೆಸಿದ ಕಾಕ್ಯುಲರ್ ಇಂಫ್ಲ್ಯಾಂಟ್ ಚಿಕಿತ್ಸೆಯ ನಂತರದ ಸ್ವಿಚ್ ಆನ್ ಅನ್ನು ಸಂಸ್ಥೆಯ ಮುಖ್ಯಸ್ಥ ಎನ್. ವಿನಯ ಹೆಗ್ಡೆ ನಡೆಸಿದರು.   

ಉಳ್ಳಾಲ: 'ಕಿವಿ ಹಾಗೂ ಬಾಯಿ ದೋಷವಿರುವ ಮಕ್ಕಳು ಸರ್ಕಾರದ ನೆರವಿನೊಂದಿಗೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದರು.

ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯಲ್ಲಿ, ಕಿವುಡುತನ ಸಮಸ್ಯೆ ಇದ್ದ  2 ವರ್ಷದ ಮಗುವಿಗೆ ಕಾಕ್ಯುಲರ್ ಇಂಫ್ಲ್ಯಾಂಟ್ ಶಸ್ತ್ರಚಿಕಿತ್ಸೆಯಡಿ, ಕಿವಿಯಲ್ಲಿ ಅಳವಡಿಸಲಾಗಿದ್ದ ಉಪಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಿವುಡುತನ ನಿರ್ಮೂಲನೆ ಕಾರ್ಯಕ್ರಮದಡಿ ಮಗುವಿಗೆ ಈ ಅತ್ಯಾಧುನಿಕ ಉಪಕರಣ ಅಳವಡಿಸಲಾಗಿದೆ. ಕರಾವಳಿ ಭಾಗದ ಖಾಸಗಿ ಆಸ್ಪತ್ರೆಗಳಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಪ್ರಥಮವಾಗಿ ಈ  ಶಸ್ತ್ರಚಿಕಿತ್ಸೆ ನಡೆಸಿದೆ’ ಎಂದರು. 

ADVERTISEMENT

ಉಪಕುಲಾಧಿಪತಿ ಡಾ. ಶಾಂತರಾಮ ಶೆಟ್ಟಿ, ಉಪಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ವೈದ್ಯಕೀಯ ಅಧೀಕ್ಷಕ ಡಾ.ಸುಮಲತಾ ಶೆಟ್ಟಿ, ಡಾ.ವಾದೀಶ್ ಭಟ್, ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ಗೌತಮ್ ಅಜಿಲ , ಮಕ್ಕಳ ವಿಭಾಗ ಮುಖ್ಯಸ್ಥೆ ಡಾ.ರತಿಕಾ ಶೆಣೈ, ಅರಿವಳಿಕೆ ವಿಭಾಗ ಮುಖ್ಯಸ್ಥ ಡಾ.ಶ್ರೀಪಾದ್ ಮೆಹೆಂದಲೆ, ಮಾನಸಿಕ ವಿಭಾಗ ಮುಖ್ಯಸ್ಥ ಡಾ.ಸತೀಶ್ ರಾವ್, ಆಡಿಯಾಲಜಿ ವಿಭಾಗದ ನಿರ್ದೇಶಕ ಡಾ.ಟಿ. ದತ್ತಾತ್ರೇಯ, ಪ್ರಾಂಶುಪಾಲೆ ಡಾ.ಶ್ವೇತಾ, ಸ್ಪೂರ್ತಿ, ಧನಂಜಯ್ ಇದ್ದರು.

‘4 ತಿಂಗಳ ಹಿಂದೆ ಈ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ತಪಾಸಣೆಯಲ್ಲಿ ಮಗುವಿಗೆ ನರದೋಷದಿಂದ ಕಿವಿ ಕೇಳದಿರುವುದು ಗಮನಕ್ಕೆ ಬಂತು. ಆಯುಷ್ಮಾನ್ ಯೋಜನೆಯಡಿ  ಬಿಡುಗಡೆಯಾದ ₹6.20 ಲಕ್ಷ ಮೊತ್ತದಲ್ಲಿ ಕಾಕ್ಯುಲರ್ ಇಂಫ್ಲ್ಯಾಂಟ್ ಶಸ್ತ್ರಚಿಕಿತ್ಸೆ ನಡೆಸಿ, ಧ್ವನಿ ಕೇಳಿಬಲ್ಲ ಉಪಕರಣ ಅಳವಡಿಸಲಾಗಿತ್ತು.  ಸೋಮವಾರ ಈ ಉಪಕರಣವನ್ನು ಚಾಲನೆಗೊಳಿಸಲಾಗಿದ್ದು, ಮಗುವಿಗೆ ಕಿವಿ ಕೇಳಿಸಲು ಆರಂಭಿಸಿದೆ’ ಎಂದು  ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ಗೌತಮ್ ಅಜಿಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.