ಮಂಗಳೂರು: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಂತೂರು ಹಾಗೂ ಕೆಪಿಟಿ ಜಂಕ್ಷನ್ ಗಳಲ್ಲಿ ಹೊಂಡಗಳಿಂದಾಗಿ ನಿತ್ಯವೂ ವಾಹನದಟ್ಟಣೆ ಉಂಟಾಗುತ್ತಿದೆ. ಈ ಜಂಕ್ಷನ್ ಗಳನ್ನು ಹಾಗುಹೊಗಲು ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮಂಗಳವಾರ ಈ ಎರಡೂ ವೃತ್ತಗಳನ್ನು ಪರಿಶೀಲಿಸಿದರು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ವಹಿಸುವಂತೆ ಪಾಲಿಕೆ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತೂರು ಹಾಗೂ ಕೆಪಿಟಿಯಲ್ಲಿ ಹೆದ್ದಾರಿಯನ್ನು ರಸ್ತೆಗಳು ಕೂಡುವಲ್ಲಿ ಸೃಷ್ಟಿಯಾಗಿರುವ ಹೊಂಡಗಳನ್ನು ತ್ವರಿತವಾಗಿ ಮುಚ್ಚಬೇಕು.ಇಲ್ಲಿ ಫೇವರ್ ಫಿನಿಶ್ ಡಾಂಬರೀಕರಣ ಮಾಡಬೇಕು ಎಂದು ನಿರ್ದೇಶನ ನೀಡಿದರು.
ನಂತೂರು ಮತ್ತು ಕೆಪಿಟಿ ವೃತ್ತಗಳನ್ನು ನಿತ್ಯವೂ ಪರಿಶೀಲಿಸಿ ಪ್ರತಿ ಎರಡು ದಿನಕ್ಕೊಮ್ಮೆಯಾದರೂ ಹೊಂಡ ಮುಚ್ಚಲು ಕ್ರಮವಹಿಸಬೇಕು ಎಂದು ಎನ್ಎಚ್ಎಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾಲಿಕೆ ಆಯುಕ್ತ ಆನಂದ ಸಿ.ಎಲ್, ಕಂದಾಯ ವಿಭಾಗದ ಉಪಾಯುಕ್ತ ಗಿರೀಶ್ ನಂದನ್, ಕಾರ್ಯಪಾಲಕ ಎಂಜಿನಿಯರ್ ನರೇಶ್ ಶೆಣೈ, ಎನ್ಎಚ್ಎಐ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.