ADVERTISEMENT

ಪ್ರಯಾಗ್ ಮಾದರಿಯಲ್ಲಿ ಪುಣ್ಯ ಕ್ಷೇತ್ರ: ಚಿಂತನೆ

ಮಹಾಲಿಂಗೇಶ್ವರ ದೇವರ ಜಳಕ ಸ್ಥಳದ ಅಭಿವೃದ್ಧಿ: ಶಾಸಕ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:51 IST
Last Updated 13 ಜೂನ್ 2025, 15:51 IST
ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನ ಮಾಡುವ ವೀರಮಂಗಲದ ಜಳಕ ಗುಂಡಿಯ ಸ್ಥಳವನ್ನು ಅಭಿವೃದ್ಧಿಗೊಳಿಸುವ ಸಂಬಂಧ ಶಾಸಕ ಅಶೋಕ್‌ಕುಮಾರ್‌ ರೈ ಅವರು ಶುಕ್ರವಾರ ಪರಿಶೀಲನೆ ನಡೆಸಿದರು
ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನ ಮಾಡುವ ವೀರಮಂಗಲದ ಜಳಕ ಗುಂಡಿಯ ಸ್ಥಳವನ್ನು ಅಭಿವೃದ್ಧಿಗೊಳಿಸುವ ಸಂಬಂಧ ಶಾಸಕ ಅಶೋಕ್‌ಕುಮಾರ್‌ ರೈ ಅವರು ಶುಕ್ರವಾರ ಪರಿಶೀಲನೆ ನಡೆಸಿದರು   

ಪುತ್ತೂರು: ಪುತ್ತೂರಿನ ‌ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುವ ಜಾತ್ರೋತ್ಸವದ ಸಂದರ್ಭ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನ (ಜಳಕ) ಮಾಡುವ ವೀರಮಂಗಲದ ಸ್ಥಳವನ್ನು ಪ್ರಯಾಗ್ ಮಾದರಿಯಲ್ಲಿ ಹಂತಹಂತವಾಗಿ ಅಭಿವೃದ್ಧಿ ಪಡಿಸಿ ಪುಣ್ಯ ಕ್ಷೇತ್ರವನ್ನಾಗಿಸುವ ಪರಿಕಲ್ಪನೆ ಇದೆ ಎಂದು ಶಾಸಕ ಅಶೋಕ್‌ಕುಮಾರ್‌ ರೈ ಹೇಳಿದರು.

‌ವೀರಮಂಗಲದ ಜಳಕ ಗುಂಡಿಯ ಸ್ಥಳವನ್ನು ಅಭಿವೃದ್ಧಿಗೊಳಿಸುವ ಸಂಬಂಧ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯೊಂದಿಗೆ ಶುಕ್ರವಾರ ಪರಿಶೀಲನೆ ನಡೆಸಿದರು.

ಮಹಾಲಿಂಗೇಶ್ವರ ದೇವಳದಿಂದ ದೇವರು ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ಹೋಗುವ ವೇಳೆ ದೇವರ ಜತೆಗೆ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತರು ಬರುತ್ತಾರೆ. ಈ ಸ್ಥಳಕ್ಕೆ ವಿಶೇಷತೆ ಇದ್ದು, ವಿಶೇಷ ಕಲ್ಪನೆ ಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ದೇವರ ಜತೆಗೆ 1 ಲಕ್ಷದಷ್ಟು ಭಕ್ತರು ಬಂದು ಪುಣ್ಯ ಸ್ಥಾನ ಮಾಡುವ ವ್ಯವಸ್ಥೆಗಳಾಗಬೇಕು. ಇದಕ್ಕೆ ಬೇಕಾದ ನೀರಿನ ವ್ಯವಸ್ಥೆ, ಸ್ನಾನ ಮಾಡಿದ ಬಳಿಕ ಬಟ್ಟೆ ಬದಲಾಯಿಸುವ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಗಳು ಆಗಬೇಕಿದೆ ಎಂದರು.

ADVERTISEMENT

ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ, ಊರಿನ ಭಕ್ತರು ಸೇರಿ ಈ ಸ್ಥಳಕ್ಕೆ ಯಾವ ರೀತಿಯ ರೂಪುರೇಷೆಗಳನ್ನು ಕೊಡಬಹುದು ಎಂಬ ಕುರಿತು ಚರ್ಸಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ್, ಈಶ್ವರ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ರಿ ಪೂರ್ಣೇಶ್‌ ಭಂಡಾರಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ, ನರಿಮೊಗರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಚಂದ್ರಲೇಖ, ಸದಸ್ಯೆ ಪದ್ಮಾವತಿ, ವಲಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹರಿಣಾಕ್ಷಿ ಭಾಗವಹಿಸಿದ್ದರು.

ರಸ್ತೆ, ದಾರಿ ವಿಸ್ತರಣೆ: ದೇವರು ಅವಭೃತ ಸ್ನಾನಕ್ಕೆ ತೆರಳುವ ವೀರಮಂಗಲ ಭಾಗದ ರಸ್ತೆಯನ್ನು ಹಾಗೂ ತೋಟದ ಮಧ್ಯೆ ಹಾದು ಹೋಗುವ ಕಾಲು ದಾರಿಯನ್ನು ವಿಸ್ತರಿಸಲಾಗುವುದು. ರಸ್ತೆ ಮತ್ತು ದಾರಿಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗುವುದು. ದೇವರು ಅವಭೃತ ಸ್ನಾನ ಮಾಡುವ ಜಾಗದಲ್ಲಿ ನದಿಯ ಬದಿಗೆ ತಡೆಗೋಡೆ ನಿರ್ಮಿಸಲಾಗುವುದು. ಈ ಕೆಲಸಗಳನ್ನು ಮುಂದಿನ ವರ್ಷದ ದೇವರ ಅವಭೃತ ಸ್ನಾನಕ್ಕೆ ಮುಂಚಿತವಾಗಿ ಮಾಡಲಾಗುವುದು ಎಂದು ಅಶೋಕ್‌ ರೈ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.