
ಮಂಗಳೂರು: ತುಳುನಾಡಿನ ವಿವಿಧ ಆರಾಧನಾ ಪರಂಪರೆಯ ಮೂಲಸತ್ವ, ಕಟ್ಟುಪಾಡುಗಳನ್ನು ಉಳಿಸುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಆಯೋಜಿಸಿರುವ ಧರ್ಮಾವಲೋಕನ ಸಭೆ ಡಿ.21ರಂದು ಉರ್ವದ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಯತಿಗಳು ಮತ್ತು ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯುವ ಸಭೆಯಲ್ಲಿ ವಿವಿಧ ಅರಮನೆ, ಬೀಡುಗಳ ಅರಸರು, ಗುತ್ತು ಮನೆತನದ ಗಡಿಕಾರರು ಮತ್ತು ಯಜಮಾನರ ಪಾಲ್ಗೊಳ್ಳಲಿದ್ದು ವಿಶ್ವಹಿಂದೂ ಪರಿಷತ್, ಹಿಂದೂ ಯುವಸೇನೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಸಹಯೋಗವಿದೆ ಎಂದು ಗುರುಪುರ ದೋಣಿಂಜೆಗುತ್ತು ಗಡಿ ಪ್ರಧಾನ ಪ್ರಮೋದ್ ಕುಮಾರ್ ರೈ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 9.30ಗೆ ಉದ್ಘಾಟನೆಗೊಂಡು ಸಂಜೆಯ ವರೆಗೆ ನಡೆಯಲಿರುವ ಸಭೆಯಲ್ಲಿ ಎರಡು ಹಂತದ ಅವಲೋಕನ ನಡೆಯಲಿದೆ. ದೇವಸ್ಥಾನಗಳು ಮತ್ತು ಧರ್ಮಾಚರಣೆ ವಿಷಯದಲ್ಲಿ ಬೆಳಿಗ್ಗೆ 10.30ಕ್ಕೆ, ದೈವಾರಾಧನೆ, ನಾಗಾರಾಧನೆ ಮತ್ತು ಧರ್ಮಾಚರಣೆ ವಿಷಯದ ಬಗ್ಗೆ ಮಧ್ಯಾಹ್ನ 2.30ಕ್ಕೆ ವಿಷಯ ಮಂಡನೆ ನಡೆಯಲಿದೆ. ಮೊದಲ ಗೋಷ್ಠಿಯಲ್ಲಿ ಕಟೀಲು ಶ್ರೀ ಕ್ಷೇತ್ರದ ಹರಿನಾರಾಯಣ ಆಸ್ರಣ್ಣ, ನೀಲೇಶ್ವರದ ಪದ್ಮನಾಭ ತಂತ್ರಿ, ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಪೊಳಲಿ ಶ್ರೀ ಕ್ಷೇತ್ರದ ಗಿರಿಪ್ರಸಾದ್ ತಂತ್ರಿ, ಪಂಜದ ಭಾಸ್ಕರ ಭಟ್ ಮತ್ತು ಬಪ್ಪನಾಡು ಕ್ಷೇತ್ರದ ಪ್ರಸಾದ್ ಭಟ್ ವಿಷಯ ಮಂಡಿಸುವರು. ಮೂಲ್ಕಿ ಅರಮನೆಯ ದುಗ್ಗಣ್ಣ ಸಾವಂತ, ಆಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ, ಕುಂಬ್ಳೆ ರಾಜವಂಶಸ್ಥ ರಾಜೇಂದ್ರ ರಾವ್ ಮಾಯಿಪಾಡಿ, ಕೂಳೂರು ಬೀಡು ಆಶಿಕ್ ಕುಮಾರ್ ಜೈನ್ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಎರಡನೇ ಗೋಷ್ಠಿಯಲ್ಲಿ ಕುಡುಪು ಕ್ಷೇತ್ರದ ಕೃಷ್ಣರಾಜ ತಂತ್ರಿ, ಬಲ್ನಾಡು ಕ್ಷೇತ್ರದ ಪ್ರಶಾಂತ್ ನೆಲ್ಲಿತ್ತಾಯ, ದೈವಾರಾಧಕ ಕಮಲಾಕ್ಷ ಗಂಧಕಾಡು, ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ವಿಷಯ ಮಂಡಿಸಲಿದ್ದು ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಚೌಟರಸ, ವಿಟ್ಲ ಸೀಮೆಯ ಬಂಗಾರು ಅರಸರು ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ‘ಭಕ್ತಿ ಪಾರಮ್ಯ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ ಎಂದು ತಿಳಿಸಿದರು.
ಸನಾತನ ಧರ್ಮದಲ್ಲಿ ಸಂಕುಚಿತ ಮನೋಭಾವದಿಂದಾಗಿ ತಿಳಿದವರಲ್ಲಿ ಯಾರೂ ಮಾಹಿತಿ ಕೇಳುವುದಿಲ್ಲ. ಇದನ್ನು ಹೋಗಲಾಡಿಸಿ ಎಲ್ಲರೂ ಒಂದು ಎಂಬ ಧಾರ್ಮಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಸಭೆಯನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ಅಧಿಕಾರಿ, ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು, ಜನಾರ್ಧನ ಅರ್ಕುಳ, ಕಿರಣ್ ಉಪಾಧ್ಯಾಯ ಹಾಗೂ ಕಮಲಾಕ್ಷ ಪಂಬದ ಉಪಸ್ಥಿತರಿದ್ದರು.
ಕಮಲಾಕ್ಷ ಪಂಬದ, ಜಗದೀಶ್ ಅಧಿಕಾರಿ, ಜನಾರ್ದನ ಅರ್ಕುಳ, ಯೋಗೀಶ್ ಶೆಟ್ಟಿ ಜಪ್ಪು ಹಾಗೂ ಕಿರಣ್ ಉಪಾಧ್ಯಾಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.