ADVERTISEMENT

ಧರ್ಮಕ್ಕೆ ಶಿಸ್ತಿನ ಆವರಣ ಬೇಕು: ಹೆಗ್ಗಡೆ

ಧರ್ಮಸ್ಥಳದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:47 IST
Last Updated 4 ಅಕ್ಟೋಬರ್ 2021, 4:47 IST
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿ ಮಾತನಾಡಿದರು.   

ಉಜಿರೆ: ‘ಧರ್ಮಕ್ಕೆ ಶಿಸ್ತಿನ ಆವರಣ ಬೇಕು. ಶಿಸ್ತು ಪ್ರಧಾನ ಹಿಂದೂ ಧರ್ಮದಲ್ಲಿ ಬದ್ಧತೆ, ಸಂಯಮ ಮತ್ತು ಸ್ವಚ್ಛತೆಗೆ ಆದ್ಯತೆ ಇದೆ. ಎಲ್ಲ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಶ್ರದ್ಧಾ- ಭಕ್ತಿಯೊಂದಿಗೆ ಭಕ್ತಾದಿಗಳು ಸಂಯಮದಿಂದ ಹಾಗೂ ಶಿಸ್ತಿನಿಂದ ವರ್ತಿಸಿ ಪಾವಿತ್ರ್ಯ ಕಾಪಾಡಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಂಬಿಕೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಂಧ ಅನುಕರಣೆ ಸಲ್ಲದು. ತೀರ್ಥ ಕ್ಷೇತ್ರಗಳಲ್ಲಿ ಎಲ್ಲರೂ ಶಿಸ್ತಿನಿಂದ ವರ್ತಿಸಿ ಸ್ವಚ್ಛತೆ ಕಾಪಾಡಬೇಕು. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ ಭಕ್ತರು ಸ್ನಾನ ಮಾಡಿ ಬಟ್ಟೆ, ಸಾಬೂನು, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ನದಿ ನೀರಿಗೆ ಹಾಕಿ ಕಲುಷಿತ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ADVERTISEMENT

ಸಾಕಷ್ಟು ಸಿಬ್ಬಂದಿ ಹಾಗೂ ಸೂಚನಾ ಫಲಕಗಳೊಂದಿಗೆ ಮುಂಜಾಗರೂಕತೆ ವಹಿಸಿದರೂ, ಸಂಪ್ರದಾಯ ಮತ್ತು ಅಂಧ ಅನುಕರಣೆ ನೆಪದಲ್ಲಿ ನದಿ ನೀರು ಮಲಿನವಾಗುತ್ತಿದೆ. ಅಯ್ಯಪ್ಪ ಭಕ್ತರೆಲ್ಲ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಶಬರಿ ಮಲೆಗೆ ಹೋಗುತ್ತಾರೆ. ಅವರ ತೀರ್ಥಯಾತ್ರೆ ಶಿಸ್ತು, ಸಂಯಮ ಮತ್ತು ಬದ್ಧತೆಯನ್ನು ಹೆಗ್ಗಡೆ ಅವರು ಶ್ಲಾಘಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ವರ್ಷದಲ್ಲಿ ಎರಡು ಬಾರಿ, ಮಕರ ಸಂಕ್ರಾಂತಿ ದಿನ, ಏ. 14 ರಂದು ರಾಜ್ಯದ ಚರ್ಚ್‌, ಮಸೀದಿ, ಬಸದಿ ಹಾಗೂ ದೇವಸ್ಥಾನಗಳು ಸೇರಿದಂತೆ ಎಲ್ಲ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಧರ್ಮಸ್ಥಳಕ್ಕೂ, ಶಬರಿಮಲೆ ಅಯ್ಯಪ್ಪ ಭಕ್ತರಿಗೂ ಅವಿನಾಭಾವ ಸಂಬಂಧವಿದೆ.ಪ್ರತಿ ವರ್ಷ ಎಲ್ಲ ಅಯ್ಯಪ್ಪ ಭಕ್ತರೂ ಧರ್ಮಸ್ಥಳದ ಮೂಲಕ ಶಬರಿಮಲೆಗೆ ಯಾತ್ರೆ ಮಾಡುತ್ತಾರೆ. ತಾನು ಕೂಡ ಅಜ್ಜನಿಂದ ಪ್ರೇರಣೆ ಪಡೆದು ಈಗಾಗಲೇ ಎಂಟು ಬಾರಿ ಶಬರಿ ಮಲೆ ಯಾತ್ರೆ ಮಾಡಿರುವುದಾಗಿ ಅವರು ಹೇಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಸಮಿತಿ ಮಹಾ ಪೋಷಕ ಹರೀಶ್ ಪೂಂಜ ಅವರನ್ನು ಅಭಿನಂದಿಸಿದರು.

ರಾಷ್ಟ್ರೀಯ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್ ಪ್ರಾಸ್ತಾವಿಕ ಮಾತನಾಡಿ, ಸಮಿತಿ ವತಿಯಿಂದ ಶಬರಿಮಲೆಯಲ್ಲಿ ಅನ್ನದಾನ, ಪ್ಲಾಸ್ಟಿಕ್ ನಿರ್ಮೂಲನೆ, ಪಾವಿತ್ರ್ಯ ರಕ್ಷಣೆ, ಮಹಿಳೆಯರಿಗೆ ದೇವರ ದರ್ಶನಕ್ಕೆ ಅವಕಾಶ ಮೊದಲಾದ ಕಾರ್ಯ ಮಾಡಲಾಗಿದೆ ಎಂದರು.

ಸಂಯೋಜಕ ಪಿ. ಎಸ್. ಪ್ರಕಾಶ್, ವಿ. ಕೃಷ್ಣಪ್ಪ, ಕೋಶಾಧಿಕಾರಿ ವಿನೋದ್ ಮತ್ತು ಸಂಘಟನಾ ಕಾರ್ಯದರ್ಶಿ ತಮಿಳುನಾಡಿನ ದೊರೈ ಶಂಕರ್ ಜಿ, ಇದ್ದರು.

ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕೋಶಾಧಿಕಾರಿ ಮಂಗಳೂರಿನ ಆನಂದ ಶೆಟ್ಟಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಧಾಕೃಷ್ಣ ಮೆಂಡನ್ ವಂದಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ನಿರೂಪಿಸಿದರು.

ಧರ್ಮಸ್ಥಳದಲ್ಲಿ ದೇವಸ್ಥಾನದ ವಠಾರ ಹಾಗೂ ರತ್ನಗಿರಿಯಲ್ಲಿ (ಬಾಹುಬಲಿ ಬೆಟ್ಟ) ಸ್ವಚ್ಛತೆ ಕಾರ್ಯ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.