ADVERTISEMENT

ಧರ್ಮಸ್ಥಳ ಕೇಸ್: ಡಿ.16ರಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 13:47 IST
Last Updated 12 ಡಿಸೆಂಬರ್ 2025, 13:47 IST
   

ಮಂಗಳೂರು:  ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ರಚನೆಯಾಗಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಆ ವ್ಯಾಪ್ತಿಯಲ್ಲಿ ದಾಖಲಾಗಿರುವ ಮತ್ತು ದಾಖಲಾಗುವ ಎಲ್ಲ ಅಪರಾಧ ಪ್ರರಕಣಗಳ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇದೇ 16ರಂದು ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಮತ್ತು ಮಹಿಳಾ ನ್ಯಾಯ ಸಮಾವೇಶ’ ಆಯೋಜಿಸಲಾಗಿದೆ ಎಂದು ‘ಕೊಂದವರು ಯಾರು?‘ ಆಂದೋಲದನ ಜ್ಯೋತಿ ಎ. ತಿಳಿಸಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟಕ್ಕೆ ರಾಜ್ಯದ ವಿವಿಧೆಡೆಯ ಮಹಿಳೆಯರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾವಿರ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಮಾವೇಶಕ್ಕೆ ಅಗತ್ಯವಿರುವ  ಅನುಮತಿಯನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದಿದ್ದೇವೆ ಎಂದರು.

‘ಅಂದು ಬೆಳಿಗ್ಗೆ 10ಕ್ಕೆ ಬೆಳ್ತಂಗಡಿಯ ಮಾರಿಗುಡಿಯಿಂದ ತಾಲ್ಲೂಕು ಕಚೇರಿ ಆವರಣದ ವರೆಗೆ ಸುಮಾರು ಒಂದು ಕಿ.ಮೀ ಮೌನ ಮೆರವಣಿಗೆ ನಡೆಯಲಿದೆ. ನಮಗೆ ಹೇಳಬೇಕಿರುವುದನ್ನು ಫಲಕಗಳ ಮೂಲಕ ಹೇಳುತ್ತೇವೆ. ನಾವು ಯಾರ ಮೇಲೂ ಆರೋಪ ಮಾಡುವುದಿಲ್ಲ. ಆ ಭಾಗದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಇವರೇ ಭಾಗಿಯಾಗಿದ್ದಾರೆ ಎಂದು ನಾವು ಯಾರತ್ತಲೂ ಬೆರಳು ಮಾಡುತ್ತಿಲ್ಲ. ಆದರೆ, ವ್ಯವಸ್ಥೆಯ ಲೋಪ ಪ್ರಶ್ನಿಸುತ್ತಿದ್ದೇವೆ. ಧರ್ಮಸ್ಥಳ ಪೊಲೀಸ್‌ ಠಾಣೆಯ ವ್ಯಾಪ್ತಿಯ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳು ಪತ್ತೆಯಾಗಿಲ್ಲ ಏಕೆ ಎಂಬುದು ನಮ್ಮೆಲ್ಲರ ಪ್ರಶ್ನೆಯಾಗಿದ್ದು, ಅದನ್ನು ಕೇಳುತ್ತೇವೆ‘ ಎಂದರು.

ADVERTISEMENT

ಪ್ರಸನ್ನ ರವಿ ಮಾತನಾಡಿ, ‘ಈ ಹೋರಾಟಕ್ಕೆ ನ್ಯಾಯಾಲಯ ತಡೆ ನೀಡಿದೆ ಎಂಬಿತ್ಯಾದಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗುತ್ತಿದೆ. ಕೆಲವು ಮಾಧ್ಯಮಗಳು ದಿಕ್ಕು ತಪ್ಪಿಸುತ್ತಿವೆ. ನಮ್ಮ ಕಾರ್ಯಕ್ರಮಕ್ಕೆ ಯಾವುದೇ ತೊಡಕು ಇಲ್ಲ. ನಾವೂ ಅಷ್ಟೇ, ಯಾವುದೇ ಗೊಂದಲ ಸೃಷ್ಟಿಸಲು ಇದನ್ನು ಮಾಡುತ್ತಿಲ್ಲ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು‘ ಎಂದು ಕೋರಿದರು.

‘ಕೊಂದವರು ಯಾರು?‘ ಆಂದೋಲದನ ಗೀತಾ ಸುರತ್ಕಲ್‌, ಸಿಂಧೂ ದೇವಿ, ಕಿರಣ್‌ ಪ್ರಭ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಎಸ್‌ಐಟಿ ಸ್ಥಳೀಯ ಅಧಿಕಾರಿಗಳನ್ನು ಬದಲಿಸಲಿ

‘ಎಸ್‌ಐಟಿಗೆ ದೂರು ನೀಡುವವರನ್ನು ಬೆದರಿಸುವ ಅಧಿಕಾರಿಗಳನ್ನು ಬದಲಿಸಬೇಕು. ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ, ಅನುಚೇತ್‌ ಅವರ ಬಗ್ಗೆ ನಮ್ಮ ತಕರಾರು ಇಲ್ಲ. ಎಸ್‌ಐಟಿಯ ಸ್ಥಳೀಯ ಅಧಿಕಾರಿಗಳು ದೂರು ನೀಡಲು ಭಯಮುಕ್ತ ವಾತಾವರಣ ಸೃಷ್ಟಿಸಿಲ್ಲ. ದೂರು ನೀಡಲು ಹೋಗಿ ಬಂದವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ’ ಎಂದರು ಜ್ಯೋತಿ ಎ. ಹೇಳಿದರು. 

‘ಆರೋಪಗಳ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿದೆ. ಆ ಸರ್ಕಾರದ ಉಪ ಮುಖ್ಯಮಂತ್ರಿ ಅವರೇ ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಾರೆ. ಅವರ ಈ ಹೇಳಿಕೆಯು, ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳ ಪರವಾಗಿ ನಾವು ನಡೆಸುತ್ತಿರುವ ಹೋರಾಟದ ವಿರುದ್ಧದ ಷಡ್ಯಂತ್ರ ಎಂಬುದು ನಮ್ಮ ಭಾವನೆ‘ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.