ಧರ್ಮಸ್ಥಳ: ಆರನೇ ದಿನದ ಶೋಧ ಕಾರ್ಯಕ್ಕಾಗಿ ಕಾಡಿನೊಳಗೆ ತೆರಳಿದ ತನಿಖಾ ತಂಡ
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಸೋಮವಾರ ಶೋಧ ಕಾರ್ಯ ಆರಂಭವಾಗಿದೆ.
ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಾಕ್ಷಿ ದೂರುದಾರನ ಜೊತೆ ನೇತ್ರಾವತಿ ಸ್ನಾನ ಘಟ್ಟದ ಬಳಿ ಹೆದ್ದಾರಿ ಪಕ್ಕದ ಕಾಡಿನೊಳಗೆ ತೆರಳಿದ್ದಾರೆ.
ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ ಧರ್ಮಸ್ಥಳದಲ್ಲಿ ಒಟ್ಟು 13 ಜಾಗಗಳನ್ನು ತೋರಿಸಿದ್ದ. ಆತ ತೋರಿಸಿರುವ 10 ಜಾಗಗಳನ್ನು ಇದುವರೆಗೆ ಸರದಿ ಪ್ರಕಾರ ಅಗೆಯಲಾಗಿದೆ. ಅದರ ಅನ್ವಯ ದೂರುದಾರ ತೋರಿಸಿರುವ 11ನೇ ಜಾಗವನ್ನು ಸೋಮವಾರ ಅಗೆಯಬೇಕಿತ್ತು. ಅಧಿಕಾರಿಗಳ ತಂಡವು 11 ನೇ ಜಾಗದ ಬಳಿಯಿಂದಲೇ ಕಾಡಿನ ಒಳಗೆ ಪ್ರವೇಶಿಸಿದೆಯಾದರೂ ಆ ಜಾಗವನ್ನು ಅಗೆದಿಲ್ಲ. ಸಾಕ್ಷಿ ದೂರುದಾರನನ್ನೂ ಕಾಡಿನ ಒಳಗೆ ಕರೆದೊಯ್ದಿದೆ. ಕಾಡಿನೊಳಗೆ ಏನು ಬೆಳವಣಿಗೆಗಳಾಗುತ್ತಿವೆ ಎಂದು ತಿಳಿದುಬಂದಿಲ್ಲ.
ಸಾಕ್ಷಿ ದೂರುದಾರ ತೋರಿಸಿದ್ದ ಆರನೇ ಜಾಗದಲ್ಲಿ ಮಾತ್ರ ಗಂಡಸಿನ ಮೃತದೇಹದ ಅವಶೇಷ ಪತ್ತೆಯಾಗಿತ್ತು. ಉಳಿದ ಒಂಬತ್ತು ಜಾಗಗಳಲ್ಲಿ ಮೃತದೇಹಗಳನ್ನು ಹೂತ ಯಾವುದೇ ಕುರುಹು ಪತ್ತೆಯಾಗಿಲ್ಲ.
ಶೋಧ ಕಾರ್ಯಕ್ಕೆ ಸೋಮವಾರವೂ ಸುಮಾರು 20 ಕಾರ್ಮಿಕರನ್ನು ಬಳಸಲಾಗುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.