ADVERTISEMENT

ಧರ್ಮಸ್ಥಳ ಲಕ್ಷ ದೀಪೋತ್ಸವ: 25ರಿಂದ ಸರ್ವಧರ್ಮ ಸಮೇಳನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 11:35 IST
Last Updated 9 ನವೆಂಬರ್ 2019, 11:35 IST
ಧರ್ಮಸ್ಥಳ –ಸಾಂದರ್ಭಿಕ ಚಿತ್ರ
ಧರ್ಮಸ್ಥಳ –ಸಾಂದರ್ಭಿಕ ಚಿತ್ರ   

ಉಜಿರೆ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಇದೇ 22 ರಿಂದ 27 ರವರೆಗೆ ನಡೆಯಲಿವೆ.

25 ರಂದು ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಲೋಕಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಉದ್ಘಾಟಿಸುವರು. ಇಸ್ಕಾನ್ ಸಂಸ್ಥೆಯ ಗೌರ್ ಗೋಪಾಲನ್ ಅಧ್ಯಕ್ಷತೆ ವಹಿಸುವರು.

‌ಮೈಸೂರಿನ ಫೋಕಸ್ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಟಿ. ರಾಮಾನುಜಮ್, ದಿ ಟೈಮ್ಸ್ ಗ್ರೂಪ್‌ನ ಉಪ ಮಹಾಪ್ರಬಂಧಕ ಕದ್ರಿ ನವನೀತ ಶೆಟ್ಟಿ ಮತ್ತು ಸಾಹಿತಿ ಬೊಳುವಾರು ಮಹ್ಮದ್ ಕುಂಞಿ ಉಪನ್ಯಾಸ ನೀಡುವರು.
ವಿದ್ವಾನ್ ಡಾ. ಕೆ. ವಾಗೀಶ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ಇದೇ 26 ರಂದು ಸಾಹಿತ್ಯ ಸಮ್ಮೇಳನದ ಅಧಿವೇಶನವನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು.

ADVERTISEMENT

ಸಾಹಿತಿ ಕುಮಟಾದ ಶ್ರೀಧರ ಬಳಗಾರ, ಉಡುಪಿಯ ವೀಣಾ ಬನ್ನಂಜೆ ಮತ್ತು ವಾಗ್ಮಿ ರಿಚರ್ಡ್‌ ಲೂಯಿಸ್ ಉಪನ್ಯಾಸ ನೀಡುವರು. ವಿದ್ವಾನ್ ಅಶೋಕ್ ಕುಮಾರ್ ಮತ್ತು ಬಳಗದವರಿಂದ ಕಥಕ್ ನೃತ್ಯ ರೂಪಕ ಪ್ರದರ್ಶನವಿದೆ. ರಾತ್ರಿ 12 ಗಂಟೆ ಬಳಿಕ ನಡೆಯುವ ಲಕ್ಷದೀಪೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಭಾಗಿಯಾಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.