ADVERTISEMENT

ದಕ್ಷಿಣ ಕನ್ನಡ: ಕಾಯಕದಿಂದ ಪರಿಣಾಮಕಾರಿ ಸುಧಾರಣೆ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ: ಧರ್ಮಸ್ಥಳದಲ್ಲಿ ಮದ್ಯವರ್ಜಿತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:23 IST
Last Updated 7 ನವೆಂಬರ್ 2025, 7:23 IST
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಸಮಾವೇಶ ಉದ್ಘಾಟಿಸಿ ಮಾತನಾಡಿದರು
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಸಮಾವೇಶ ಉದ್ಘಾಟಿಸಿ ಮಾತನಾಡಿದರು   

ಉಜಿರೆ: ಬಾಯಿಮಾತಿನಿಂದ ಪರಿವರ್ತನೆ ಸಾಧ್ಯವಿಲ್ಲ. ಕಾಯಕದ ಬಗ್ಗೆ ಮಾತು, ಉಪನ್ಯಾಸದ ಅಗತ್ಯವಿಲ್ಲ. ಮಾತಿನಲ್ಲಿ ಹೇಳುವುದನ್ನು ಕಾಯಕದಲ್ಲಿ ಮಾಡಿ ತೋರಿಸಬೇಕು ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಗುರು ಶಾಂತೇಶ್ವರ ಸಂಸ್ಥಾನದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ನಡೆದ 2000ನೇ ಮದ್ಯವರ್ಜನ ಶಿಬಿರದ ಮದ್ಯವರ್ಜಿತರ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕ್ರಾಂತಿಕಾರಿ ಪರಿವರ್ತನೆ ಮಾಡಿ ತೋರಿಸಿದ್ದಾರೆ. ಮಹಿಳಾ ಸಬಲೀಕರಣ, ಮದ್ಯವರ್ಜನ ಶಿಬಿರಗಳು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ, ಸಹಕಾರ, ನಾಯಕತ್ವ, ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ್ದಾರೆ. ವ್ಯಸನಮುಕ್ತರು ಇತರ ಮದ್ಯವ್ಯಸನಿಗಳನ್ನೂ ವ್ಯಸನಮುಕ್ತರಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಮಾವೇಶ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ, ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಬಸವಣ್ಣ ಹೇಳಿದ ವಚನವನ್ನು ನಾವು ನೆನಪಿನಲ್ಲಿಟ್ಟುಕೊಂಡು ಸತ್ಕಾರ್ಯಗಳನ್ನೇ ಮಾಡಬೇಕು. ಎಲ್ಲರೂ ಜಾಗೃತರಾಗಿ ಅನ್ಯಾಯ, ಅತ್ಯಾಚಾರ ತಡೆಗಟ್ಟಬೇಕು ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯದಲ್ಲಿ ಸಾಮಾಜಿಕ ಪಿಡುಗುಗಳು ಹಾಗೂ ದುಶ್ಚಟಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ನೀತಿಪಾಠಗಳನ್ನು ಅಳವಡಿಸಬೇಕು. ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ಅನಧಿಕೃತ ಹಾಗೂ ನಕಲಿ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಅವರು ಸಲಹೆ ನೀಡಿದರು.

ವಿಡಿಯೊ ಬಿಡುಗಡೆ ಮಾಡಿದ ಹೇಮಾವತಿ ವೀ.ಹೆಗ್ಗಡೆ ಮಾತನಾಡಿ, ದುಶ್ಚಟಗಳ ಭಿಕ್ಷೆಗಿಂತ ಸದ್ಗುಣಗಳ ದೀಕ್ಷೆಯಿಂದ ಜೀವನ ಪಾವನವಾಗುತ್ತದೆ. ವ್ಯಸನಮುಕ್ತರು ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು.

ಮದ್ಯವ್ಯಸನಿಗಳನ್ನು ವ್ಯಸನಮುಕ್ತರಾಗಿ ಮನ ಒಲಿಸಿದ ನವಜೀವನ ಸಮಿತಿ ಸದಸ್ಯರನ್ನು ‘ಜಾಗೃತಿ ಮಿತ್ರ’ ಮತ್ತು ‘ಜಾಗೃತಿ ಅಣ್ಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿ.ಹರ್ಷೇಂದ್ರ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಶಿಕ್ಷಕ ಸತ್ಯಮೂರ್ತಿ, ರಾಮದುರ್ಗದ ಸುವರ್ಣ ಬಸವರಾಜ್ ಅನಿಸಿಕೆ ವ್ಯಕ್ತಪಡಿಸಿದರು.

ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಬೆಂಗಳೂರು ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಭಾಗವಹಿಸಿದ್ದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಸಮಾಜ ಸೇವಕ ಮುಂಬೈನ ಆರ್.ಬಿ.ಹೆಬ್ಬಳ್ಳಿ ಅವರನ್ನು ಗೌರವಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಯಾವುದೇ ಆಕರ್ಷಣೆ, ಒತ್ತಡಕ್ಕೆ ಒಳಗಾಗದೆ ಮದ್ಯವರ್ಜಿತರು ಸಂಯಮ ಮತ್ತು ದೃಢ ಸಂಕಲ್ಪದಿಂದ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ.ಪಾಯಸ್‌ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ವಂದಿಸಿದರು. ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ಮತ್ತು ಭಾಸ್ಕರ್ ಎನ್. ಕಾರ್ಯಕ್ರಮ ನಿರ್ವಹಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಸಮಾವೇಶ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.